ಬಳ್ಳಾರಿ: ಹೂವಿನ ಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವವು ಇದೇ 11ರಂದು ವಿಜೃಂಭಣೆಯಿಂದ ಜರುಗಲಿದೆ. ಈ ನಿಟ್ಟಿನಲ್ಲಿ ಕೈಗೊಳ್ಳಲಾದ ಅಗತ್ಯ ಹಾಗೂ ಅಂತಿಮ ಹಂತದ ಸಿದ್ಧತೆಗಳನ್ನು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಪಿ.ಎನ್. ಲೋಕೇಶ್, ತಹಶಿಲ್ದಾರ್ ರಾಘವೇಂದ್ರ ಹಾಗೂ ತಾ.ಪಂ. ಇಒ ವಿಶ್ವನಾಥ ನೇತೃತ್ವದ ತಂಡ ಶನಿವಾರ ಪರಿಶೀಲನೆ ನಡೆಸಿತು.
ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ, ಪಾರ್ಕಿಂಗ್ ಸ್ಥಳಗಳು, ಕಾರ್ಣಿಕ ನುಡಿಯುವ ಸ್ಥಳಗಳ ವ್ಯವಸ್ಥೆ ಪರಿಶೀಲನೆ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಐಜಿಪಿ ನಂಜುಂಡಸ್ವಾಮಿ ಅವರು ಕೂಡ ಮೈಲಾರಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು. ಈ ವೇಳೆ ಮೈಲಾರಲಿಂಗೇಶ್ವರ ದೇವಸ್ಥಾನದ ಇಒ ಪ್ರಕಾಶ್, ಧಾರ್ಮಿಕ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.