ಬಳ್ಳಾರಿ: ಇಲ್ಲಿನ 15ನೇ ವಾರ್ಡ್ನ ಪಾಲಿಕೆ ಸದಸ್ಯ ಹಾಗು ಕಾಂಗ್ರೆಸ್‌ನ ನೂರ್ ಮೊಹಮ್ಮದ್ ಎಂಬುವವರು ಇಂದು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಮಹಾಪಡಿ ಪೂಜೆ ಆಯೋಜಿಸಿದರು. ನಗರದ ಬಲಿಜ ಭವನದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಪಡಿಪೂಜೆಯನ್ನು ಅವರು ಏರ್ಪಡಿಸಿ ಗಮನ ಸೆಳೆದರು.
ವೇದಿಕೆಯ ಮೇಲೆ ನಿರ್ಮಿಸಲಾಗಿದ್ದ 18 ಮೆಟ್ಟಿಲುಗಳ ಅಯ್ಯಪ್ಪ ಸ್ವಾಮಿಯ ಮಂಟಪದಲ್ಲಿ ಪೂಜೆ ನಡೆಯಿತು. ಇದಕ್ಕೂ ಮುನ್ನ ಮಾಲಾಧಾರಿಗಳಿಗೆ ಪಾದಪೂಜೆ ಸಲ್ಲಿಸಲಾಯಿತು. ಪಾದಪೂಜೆಯಲ್ಲಿ ಹಾಜರಿದ್ದ ನೂರ್ ಮೊಹಮ್ಮದ್ ಮಾಲಾಧಾರಿಗಳಿಗೆ ಹಾರ ಹಾಕಿ ನಮಸ್ಕರಿಸಿದರು.
ಗುರುಸ್ವಾಮಿ ರಾಮ್ ಬಾಬು ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನಡೆದವು. ಗಣಪತಿ, ಸುಬ್ರಹ್ಮಣ್ಯ, ಶಿವ ಹಾಗೂ ಕೊನೆಯದಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿ ಪೂಜೆ ನಡೆಯಿತು. ಮಹಾ ಪಡಿಪೂಜೆ ಕಾರ್ಯಕ್ರಮಕ್ಕೆ ಬಳ್ಳಾರಿ ಜಿಲ್ಲೆಯ ಮುಸ್ಲಿಂ ಧರ್ಮಗುರು ಖಾಜಿಸಾಬ್ ಹಾಜರಾಗಿ ಅಯ್ಯಪ್ಪ ಮಾಲಾಧಾರಿಗಳಿಗೆ ಶುಭ ಹಾರೈಸಿದರು. ಶಬರಿ ದರ್ಶನಕ್ಕೆ ತೆರಳುವ ಮಾಲಾಧಾರಿಗಳ ಪ್ರಯಾಣ ಸುಖಕರವಾಗಿರಲಿ ಎಂದು ಆಶಿಸಿದರು.
ಮಾಲಾಧಾರಿಗಳಾಗಿದ್ದ ಮಾಜಿ ಮೇಯರ್ ವೆಂಕಟರಮಣ, ಕಾಂಗ್ರೆಸ್ ಮುಖಂಡರಾದ ಸುಬ್ಬರಾಯುಡು, ವಿಷ್ಣು ಬೋಯಪಾಟಿ ಸೇರಿದಂತೆ ನೂರಾರು ಮಂದಿ ಅಯ್ಯಪ್ಪ ಮಾಲಾಧಾರಿಗಳು ಪೂಜೆಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ಕಾವಿ ಬಟ್ಟೆ, ಮಾಲೆ ಧರಿಸಿ ಅಂಜನಾದ್ರಿಗೆ ಬಂದು ಭಾವೈಕ್ಯತೆ ಸಾರಿದ ಮುಸ್ಲಿಂ ಭಕ್ತ