ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ಎಂ.ಲಕ್ಲಹಳ್ಳಿ ಸುತ್ತಲೂ ಇರುವ ನೂರಾರು ಎಕರೆಯ ಭೂಮಿಯಲ್ಲಿ ರೈತರು ಉಳುಮೆ ಮಾಡುತ್ತಿರುವುದನ್ನು ಮನಗಂಡ ಅರಣ್ಯ ಇಲಾಖೆಯ ಅಧಿಕಾರಿಗಳು ಉಳುಮೆ ಮಾಡೋದನ್ನ ತಡೆದು ಆ ಭೂಮಿಯಲ್ಲಿ ಗಿಡ ನೆಡುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಇದರಿಂದ ನೂರಾರು ರೈತ ಕುಟುಂಬಗಳು ಬೀದಿಪಾಲಾಗುವುದನ್ನು ಸೂಕ್ಷ್ಮವಾಗಿ ಅರಿತುಕೊಂಡ ಬಳ್ಳಾರಿಯ ಸಂಸದ ವೈ.ದೇವೇಂದ್ರಪ್ಪ, ಕೂಡಲೇ ಎಂ.ಲಕ್ಲಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ರೈತರನ್ನ ಒಕ್ಕಲೆಬ್ಬಿಸದಂತೆ ಅರಣ್ಯ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಸತತ 60 ವರ್ಷಗಳಿಂದ ಈ ಭೂಮಿಯಲ್ಲಿ ಉಳುಮೆ ಮಾಡುತ್ತಾ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಈಗ ದಿಢೀರನೆ ಉಳುಮೆ ಮಾಡೋದನ್ನ ಬಿಡಿಸಿ ಗಿಡಗಳನ್ನ ನೆಡಲು ಮುಂದಾಗಿರೋದು ತರವಲ್ಲ.
ಈ ಸಂಬಂಧ ಅರಣ್ಯ ಸಚಿವ ಆನಂದ್ ಸಿಂಗ್ ಅವರೊಂದಿಗೆ ಚರ್ಚಿಸಿ, ಅರಣ್ಯ ಇಲಾಖೆಯ ಸುಪರ್ದಿಗೆ ಒಳಪಡುವ ಈ ಭೂಮಿಯನ್ನ ರೈತರ ಉಳುಮೆಗೆ ಅವಕಾಶ ನೀಡುವಂತೆ ಕೋರುವೆ. ಅಂದಾಜು 150 ಎಕರೆ ಭೂಮಿಯಲ್ಲಿ ನಾನಾ ಬೆಳೆಗಳನ್ನ ರೈತರು ಬೆಳೆಯುತ್ತಿದ್ದಾರೆ. ಹೀಗಾಗಿ ಅರಣ್ಯ ಅಧಿಕಾರಿಗಳು ರೈತರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು. ನಾನು ಸಚಿವರೊಂದಿಗೆ ಚರ್ಚಿಸಿ ಉಳುಮೆ ಮಾಡಲು ಅವಕಾಶ ಕಲ್ಪಿಸಿಕೊಡುವುದಾಗಿ ರೈತರಿಗೆ ಸಂಸದ ವೈ.ದೇವೇಂದ್ರಪ್ಪ ಭರವಸೆ ನೀಡಿದ್ದಾರೆ.