ಬಳ್ಳಾರಿ: ನೆರೆ ಸಂತ್ರಸ್ತರಿಗೆ ಸೂರು ಕಲ್ಪಿಸುವ ಯೋಜನೆಯ ಪ್ರಗತಿ ಪರಿಶೀಲನೆ ಸಲುವಾಗಿ ಸಿರುಗುಪ್ಪ ತಾಲೂಕಿನ ನಡಿವಿ ಗ್ರಾಮಕ್ಕೆ ಮಾತ್ರ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿಯು ಭೇಟಿ ನೀಡಿ ಪರಿಶೀಲನೆ ಕಾರ್ಯ ನಡೆಸಿದೆ.
ಪಿಆರ್ಪಿ ಸಮಿತಿಯ ಅಧ್ಯಕ್ಷ ಆರೋಗ್ಯ ಜ್ಞಾನೇಂದ್ರ ನೇತೃತ್ವದಲ್ಲಿ ಶಾಸಕರಾದ ಕರುಣಾಕರರೆಡ್ಡಿ, ಸಂಜೀವ ಮಠಂದೂರು, ಸಿದ್ದು ಸವದಿ, ಪ್ರಾಣೇಶ, ಅನಿಲ್ ಚಿಕ್ಕಮಾದು, ನಾಗನಗೌಡ, ಸೋಮಲಿಂಗಪ್ಪ, ಶ್ರೀಕಾಂತ ಕೋಟ್ನೇಕರ್, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಅಧಿಕಾರಿಗಳಾದ ಪರಶಿವಮೂರ್ತಿ, ಮಹಾದೇವ ಅವರ ತಂಡವು ಭೇಟಿ ಮಾಡಿ ಪರಿಶೀಲನೆ ನಡೆಸಿದೆ.
2009ರಲ್ಲಿ ಎದುರಾದ ಪ್ರವಾಹದ ಭೀತಿಗೆ ಸಿರುಗುಪ್ಪ ತಾಲೂಕಿನ ನಡಿವಿ ಗ್ರಾಮದಲ್ಲಿ ನೂರಾರು ಕುಟುಂಬಸ್ಥರು ಮನೆ, ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದರು. ಆಗ ವಸತಿ ಸೌಲಭ್ಯ ಕಲ್ಪಿಸಲು ಸಿಎಂ ಬಿಎಸ್ವೈ ನೇತೃತ್ವದ ಸರ್ಕಾರ ನೆರೆ ಸಂತ್ರಸ್ತರಿಗೆ ಸೂರು ಕಲ್ಪಿಸಿಕೊಡುವ ಭರವಸೆ ನೀಡಿತ್ತು. ಆದರೀಗ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೆರೆ ಸಂತ್ರಸ್ತರಿಗೆ ಸೂರು ಕಲ್ಪಿಸಲಾಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಈ ದಿನ ಸಮಿತಿ ಗ್ರಾಮಕ್ಕೆ ಭೇಟಿ ನೀಡಿದೆ. ಆದರೆ, ನಡಿವಿ ಗ್ರಾಮದಲ್ಲಿ ನೆರೆ ಸಂತ್ರಸ್ತರ ನಿವಾಸಿಗಳಿಗೆ ಅಗತ್ಯ ಸೌಲಭ್ಯವನ್ನೂ ಸಹ ಕಲ್ಪಿಸಲು ಮುಂದಾಗಿಲ್ಲ. ಸರಿಯಾಗಿ ವೀಕ್ಷಿಸದೇ ಕೇವಲ ಹತ್ತೇ ಹತ್ತು ನಿಮಿಷಕ್ಕೆ ತಂಡ ಭೇಟಿ ನೀಡಿ ತರಾತುರಿಯಲ್ಲಿ ವಾಪಸ್ ಬಳ್ಳಾರಿಗೆ ಮರಳಿದೆ ಎನ್ನಲಾಗ್ತಿದೆ.
ಇನ್ನು, ನೆರೆ ಸಂತ್ರಸ್ತರಿಗೆ ಸೂರು ಕಲ್ಪಿಸುವ ಯೋಜನೆ ಬಹುತೇಕ ಪೂರ್ಣಗೊಂಡಿಲ್ಲ. ಬುನಾದಿ ಹಂತಕ್ಕೆ ನಿಲುಗಡೆಯಾಗಿ ಅನುದಾನದ ಕೊರತೆಯನ್ನು ಎದುರಿಸುತ್ತಿದ್ದಾರೆ. ಸ್ಲಂ ಹಾಗೂ ಕೊಳಚೆ ನಿರ್ಮೂಲನೆ ಇಲಾಖೆಗೆ ವಸತಿ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿದ್ದು, ಅಗತ್ಯ ಅನುದಾನದ ಕೊರತೆಯಿಂದ ಬಹುತೇಕ ಮನೆಗಳು ನೆನೆಗುದಿಗೆ ಬಿದ್ದಿವೆ. ಅದನ್ನು ಸೂಕ್ಷ್ಮವಾಗಿ ಆಲಿಸಿದ ಸಮಿತಿಯ ಅಧ್ಯಕ್ಷರು, ಶಾಸಕರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು.