ಬಳ್ಳಾರಿ: ಐದು ವರ್ಷಗಳಲ್ಲಿ ಕೋಟಿ, ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಪ್ರಧಾನಿ ಮೋದಿ ಅವರು ಯುವ ಜನತೆಗೆ ಬರೀ ಅಂಗೈಯಲ್ಲೇ ಆಕಾಶ ತೋರಿಸಿ ಮೋಸ ಮಾಡಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್ ಉಗ್ರಪ್ಪ ಆರೋಪಿಸಿದರು.
ಜಿಲ್ಲೆಯ ಹಡಗಲಿ ತಾಲೂಕಿನ ಹಂಪಸಾಗರ ಗ್ರಾಮದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉನ್ನತ ಶಿಕ್ಷಣ ಪಡೆದು ನಿರುದ್ಯೋಗಿಗಳಾಗಿರುವ ಯುವಜನತೆ ಕೆಲಸ ಕೊಡಿ ಎಂದು ಕೇಳಿದ್ರೆ ಪಕೋಡ, ವಡೆ ಮಾರಿ ಎಂದರೆ ಹೇಗೆ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.
ಯಾರ್ ಸಾಲ ಮನ್ನಾ ಮಾಡಿದ್ದಾರೆ? ಮನಮೋಹನ್ ಸಿಂಗ್, ಕರ್ನಾಟಕದಲ್ಲಿ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರು ಮಾತ್ರ ರೈತರ ಸಾಲಮನ್ನಾ ಮಾಡಿದ್ದಾರೆ. ಬಿಜೆಪಿಯವರು ಕೈಗಾರಿಕೆಗಳಿಗೆ 2,38,000 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದ್ದಾರೆ. ಅವರು ಯಾವತ್ತೂ ಬಡವರ ಮತ್ತು ರೈತರ ಸಾಲಮನ್ನಾ ಮಾಡಲ್ಲವೆಂದು ಉಗ್ರಪ್ಪ ವಾಗ್ದಾಳಿ ನಡೆಸಿದರು.
ಜಿ.ಎಸ್.ಟಿ ರೈತರಿಗೆ ಹೊರೆಯಾಗಿದೆ ರೈತರು ಬೆಳೆದ ಭತ್ತ, ಈರುಳ್ಳಿ, ಮೆಣಸಿನಕಾಯಿ, ಇನ್ನಿತರ ಬೆಳೆಗಳನ್ನು ಬೆಳೆದ ನಂತರ ಎ.ಪಿ.ಎಂ.ಸಿ ಗೆ ಹೋಗಿ ಮಾರಿದರೇ ಆ ಬೆಳೆಗೆ ಒಂದು ತಿಂಗಳ ನಂತರ ಹಣ ಬರುತ್ತಿದೆ. ಅದಕ್ಕೆ ಜಿ.ಎಸ್.ಟಿ ಯೇ ಕಾರಣವೆಂದು ಕಾಂಗ್ರೆಸ್ ಅಭ್ಯರ್ಥಿ ಆರೋಪಿಸಿದರು.
ಈ ಪ್ರಚಾರದಲ್ಲಿ ಮುಜರಾಯಿ ಸಚಿವ ಪಿ.ಟಿ ಪರಮೇಶ್ವರ್ ನಾಯಕ, ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವಯೋಗಿ ಹಾಗೂ ಕಾಂಗ್ರೆಸ್- ಜೆಡಿಎಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಈ ವೇಳೆ ಉಪಸ್ಥಿತರಿದ್ರು.