ಬಳ್ಳಾರಿ: ಉಗ್ರಪ್ಪ ಪರ ಪ್ರಚಾರದ ವೇಳೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಮೋದಿ ಸರ್ಕಾರ ಹಸಿಹಸಿ ಸುಳ್ಳಿನ ಸರ್ಕಾರ, ಕೋಮುವಾದಿ ಸರ್ಕಾರ ಎಂದು ಟೀಕಿಸಿದರು.
ಮೈತ್ರಿ ಪಕ್ಷದ ಅಭ್ಯರ್ಥಿ ವಿ.ಎಸ್ ಉಗ್ರಪ್ಪ ಪರ ಪ್ರಚಾರ ಮಾಡಲು ಮಾಜಿ ವಿಧಾನ ಪರಿಷತ್ ಸದಸ್ಯ ಮುಖ್ಯಮಂತ್ರಿ ಚಂದ್ರು ಜಿಲ್ಲೆಯ ಹಗರಿಬೊಮ್ಮನಹಳ್ಳಿ ಮತ್ತು ಮರಿಯಮ್ಮನಹಳ್ಳಿ ಗ್ರಾಮಕ್ಕೆ ಆಗಮಿಸಿ ಮಾತನಾಡಿದರು.
ಉಗ್ರಪ್ಪ ಅವರ ಕೈ, ಬಾಯಿ ಶುದ್ಧವಾಗಿದೆ. ಜೊತೆಗೆ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುವ ವ್ಯಕ್ತಿ ಎಂದು ಮುಖ್ಯಮಂತ್ರಿ ಚಂದ್ರು ಕೊಂಡಾಡಿದರು.
ಮೋದಿ ಸರ್ಕಾರವು ಕೋಮುವಾದಿ ಸರ್ಕಾರವಾಗಿದ್ದು, ಸರ್ವಾಧಿಕಾರ, ದುರಹಂಕಾರದಿಂದ ಕೂಡಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಈ ರೀತಿಯ ಚುನಾವಣೆ ಕೂಡ ಇರುವುದಿಲ್ಲ. ಜರ್ಮನಿಯಲ್ಲಿ ಹಿಟ್ಲರ್ ಇದ್ದಾಗ ಇದ್ದ ಪರಿಸ್ಥಿತಿ ಎದುರಾಗಿ ನಾವು ಅವರು ಹೇಳಿದಂತೆಯೇ ಕೇಳಬೇಕಾಗುತ್ತದೆ. ನಮಗೆ ಯಾವುದೇ ಸ್ವಾತಂತ್ರ್ಯ ಇರುವುದಿಲ್ಲ ಎಂದ ಅವರು ಈ ಬಾರಿಯೂ ಉಗ್ರಪ್ಪರನ್ನು ಗೆಲ್ಲಿಸಿ ಐದು ವರ್ಷ ಲೋಕಸಭಾ ಸದಸ್ಯರನ್ನಾಗಿ ಮಾಡಬೇಕು ಎಂದು ಸಾರ್ವಜನಿಕರಲ್ಲಿ ಕೇಳಿಕೊಂಡರು.
ಪ್ರಚಾರದ ಸಮಯದಲ್ಲಿ ಶಾಸಕ ಭೀಮನಾಯಕ, ಕೆಪಿಸಿಸಿ ಜಿಲ್ಲಾ ಅಧ್ಯಕ್ಷ ಶಿವಯೋಗಿ ಹಾಗೂ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಹಿರಿಯ ನಾಯಕರು, ಪದಾಧಿಕಾರಿಗಳು ಭಾಗವಹಿಸಿದ್ದರು.