ಬಳ್ಳಾರಿ: ನಮ್ಮ ಆಸ್ತಿ- ಪಾಸ್ತಿ ಹಾನಿಯಾಗಿರೋದಕ್ಕೆ ಕೂಪ ಮಂಡೂಕನಾದೆ ಎಂದು ಶಾಸಕ ಜಿ.ಸೋಮಶೇಖರ ರೆಡ್ಡಿ ತಮ್ಮ ಪ್ರಚೋದನಕಾರಿ ಭಾಷಣವನ್ನು ಸಮರ್ಥಿಸಿಕೊಂಡಿದ್ದಾರೆ.
ಬಳ್ಳಾರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದೇಶದ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗೋದು ಯಾರಿಗೂ ಶೋಭೆ ತರುವಂಥದ್ದಲ್ಲ. ಅಂದಾಜು 13,800 ಕೋಟಿ ರೂ.ಗಳ ಆಸ್ತಿ- ಪಾಸ್ತಿ ಹಾನಿಯಾಗಿರೋದಕ್ಕೆ ನನಗೆ ಆಕ್ರೋಶ ಬಂತು ಎಂದರು.
ಈ ಪೌರತ್ವ ತಿದ್ದುಪಡಿ ಕಾಯಿದೆಯಿಂದ ಯಾರಿಗೂ ತೊಂದರೆ ಇಲ್ಲ. ಕಾಂಗ್ರೆಸ್ ನವರು ಮುಸ್ಲಿಂ ಸಮುದಾಯವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ವಿವಿಧೆಡೆ ಆಸ್ತಿ - ಪಾಸ್ತಿ ಹಾನಿಯಾದಾಗ ಕೂಡ ಯಾವೊಬ್ಬ ಮುಸ್ಲಿಮರು ದೂರು ಕೊಟ್ಟಿಲ್ಲ. ಕಾಂಗ್ರೆಸ್ ನಾಯಕರು ದೂರು ಕೊಟ್ಟಿದ್ದಾರೆ. ಪ್ರತಿಭಟನೆಯಲ್ಲಿ ಆಸ್ತಿ - ಪಾಸ್ತಿ ಹಾನಿಯಾಗಿತ್ತು. ನನಗೆ ಬೇಜಾರಾಗಿತ್ತು, ಹಾಗಾಗಿ ನಾನು ಮಾತನಾಡಿದೆ ಎಂದರು.
ನಾನು ಮುಸ್ಲಿಂ ಧರ್ಮೀಯರ ವಿರುದ್ಧ ಮಾತನಾಡಿಲ್ಲ. ನಾನು, ನೀವು ಅದೇ, ಟ್ರೈನ್ ನಲ್ಲಿ ಪ್ರಯಾಣ ಮಾಡ್ತೇವೆ. ನಾನು ಸತ್ತರೆ, ಸ್ಮಶಾನದಲ್ಲೇ ಹೂಳ್ತಾರೆ. ನೀನು ಸತ್ತರೆ ಖಬರಸ್ತಾನ್ ನಲ್ಲಿ ಹೂಳ್ತಾರೆ. ಇಲ್ಲೆ ಹುಟ್ಟಿ ಇಲ್ಲೆ ಬೆಳೆದಿದ್ದೇವೆ. ಇಲ್ಲೆ ಸಾಯ್ತೇವೆ. ಈ ದೇಶದ ಯಾವೊಬ್ಬ ನಾಗರಿಕರಿಗೂ ಈ ಕಾಯಿದೆ ತೊಂದರೆ ಯಾಗೋಲ್ಲ. ಅವರೇನೋ ಹೇಳ್ತಾರೆ ಅಂತ ನೀವು ಬಂದಿರಿ. ಕಾಂಗ್ರೆಸ್ ನವರು ಅವರನ್ನು ಬಳಸಿಕೊಳ್ಳುತ್ತಿದ್ದಾರೆ. ನಮ್ಮ ಹಬ್ಬಕ್ಕೆ ಚಿತ್ರಾನ್ನ ಕಳಿಸಿದರೆ, ಅವರು ನಮಗೆ ಬಿರಿಯಾನಿ ಕಳಿಸ್ತಾರೆ. ನಾವು ಈಗಲೂ ಸಹೋದರರಂತಿದ್ದೇವೆ ಎಂದು ತಿಳಿಸಿದರು.