ಬಳ್ಳಾರಿ: ಸಚಿವ ಸ್ಥಾನಕ್ಕಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮೇಲೆ ಒತ್ತಡ ಹೇರಿಲ್ಲ. ಬಹಳ ಮುಖ್ಯವಾಗಿ ನಮಗೆ ಈ ಸರ್ಕಾರ ಇರಬೇಕು ಎಂದು ಶಾಸಕ ಸೋಮಶೇಖರ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ಬಳ್ಳಾರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರಗಳಿದ್ದರೆ ಅಭಿವೃದ್ಧಿ ಕಾರ್ಯಗಳು ಆಗುತ್ತವೆ ಎಂಬುದು ನಮ್ಮೆಲ್ಲರ ಅಭಿಲಾಷೆಯಾಗಿದೆ ಎಂದರು.
ಸಿಎಂ ಬಿಎಸ್ವೈಗೆ ಟೆನ್ಷನ್ ಕೊಡಲ್ಲ:
ರಾಜ್ಯದಲ್ಲಿ ಸುಭದ್ರ ಸರ್ಕಾರ ರಚನೆಯ ಕನಸು ನಮ್ಮದಾಗಿತ್ತು. ಹೀಗಾಗಿ ಸಿಎಂ ಬಿಎಸ್ವೈ ನೇತೃತ್ವದಲ್ಲಿ ಸುಭದ್ರ ಸರ್ಕಾರ ರಚನೆಯಾಗಿದೆ. ಸಚಿವ ಸ್ಥಾನ ಕೊಡೋದು, ಬಿಡೋದು ಹೈಕಮಾಂಡ್ಗೆ ಬಿಟ್ಟ ವಿಚಾರ ಎಂದರು.
ಕಲ್ಯಾಣ ಕರ್ನಾಟಕ ಭಾಗದ ಶಾಸಕರಿಗೆ ಗಣನೀಯ ಪ್ರಮಾಣದಲ್ಲಿ ಸಚಿವ ಸ್ಥಾನ ದೊರಕಿಲ್ಲ ಎಂಬ ಕೂಗನ್ನಿಟ್ಟುಕೊಂಡು ಈ ಭಾಗದ ಶಾಸಕರೆಲ್ಲರೂ ಒಗ್ಗೂಡಿ ನಿಗೂಢವಾದ ಸಭೆ ಕರೆದಿದ್ದರು ಎಂಬ ವದಂತಿ ಹಬ್ಬಿದೆ. ಶಾಸಕ ರಾಜು ಗೌಡರ ನೇತೃತ್ವದಲ್ಲಿ ಈ ಸಭೆ ನಡೆದಿದೆ ಎನ್ನಲಾಗುತ್ತಿದೆ. ಅದಕ್ಕೆ ತಾವು ಕೂಡ ಹೋಗಿದ್ದೀರಿ ಎಂಬ ಮಾಹಿತಿ ಇದೆ ಎಂಬ ಪ್ರಶ್ನೆಯೊಂದಕ್ಕೆ, ಅದೆಲ್ಲ ಸುಳ್ಳು. ಯಾವ ಸಭೆ ಕೂಡ ನಡೆದಿಲ್ಲ. ನಾವು ಹಾಗೆಲ್ಲ ಹೋಗುವುದಿಲ್ಲ ಎಂದು ನಗುತ್ತಲೇ ಪ್ರತಿಕ್ರಿಯಿಸಿದರು.