ಬಳ್ಳಾರಿ: ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡುವಂತೆ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಆಗ್ರಹಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾಯಿಸಿ ಶ್ರೀರಾಮುಲು ಅವರಿಗೆ ಉಸ್ತುವಾರಿ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಶ್ರೀರಾಮುಲು ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡುವುದರೊಂದಿಗೆ ಅವರಿಗೆ ಡಿಸಿಎಂ ಸ್ಥಾನ ನೀಡಬೇಕು. ಶ್ರೀರಾಮುಲು ಅವರನ್ನು ಉಸ್ತುವಾರಿ ಸಚಿವರನ್ನಾಗಿ ಮಾಡಿದ್ದರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತಿರಲಿಲ್ಲ. ಪಾಲಿಕೆ ಚುನಾವಣೆ ಸೋತ ಬಳಿಕವೂ, ಪಕ್ಷದ ಯಾರೊಬ್ಬರೂ ಯಾಕೆ ಸೋಲಾಯ್ತು ಎಂದು ಕೇಳಲಿಲ್ಲ. ಈ ಬಗ್ಗೆ ನನಗೆ ಅಸಮಾಧಾನ ಇದೆ ಎಂದರು.
ರಾಜ್ಯದಲ್ಲಿ ನಡೆಯುತ್ತಿರುವ ಪ್ರಸ್ತುತ ರಾಜಕೀಯ ಬೆಳವಣಿಗೆ ಬಗ್ಗೆ ಬೇಸರ ಇದೆ. ಕೋವಿಡ್ ನಿರ್ವಹಣೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಗಮನ ಕೊಡಬೇಕಿದೆ. ಯಡಿಯೂರಪ್ಪನವರು ಇನ್ನೆರಡು ವರ್ಷ ಸಿಎಂ ಅವಧಿ ಪೂರ್ಣಗೊಳಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಅರುಣ್ ಸಿಂಗ್ ಅವರನ್ನು ಭೇಟಿ ಮಾಡುತ್ತಿಲ್ಲ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಆಂಜನೇಯಸ್ವಾಮಿ, ಕನಕದುರ್ಗಮ್ಮದೇವಿ, ಕೋಟೆ ಮಲ್ಲೇಶ್ವರ ದೇವರು ಆಶೀರ್ವಾದ ನೀಡಿದರೆ ಸಚಿವ ಸ್ಥಾನ ಸಿಗುತ್ತೆ. ಸಚಿವ ಸ್ಥಾನ ನೀಡಿದರೆ ಸಮರ್ಥವಾಗಿ ನಿಭಾಯಿಸುವೆ ಎಂದು ರೆಡ್ಡಿ ಹೇಳಿದರು.
ಬಳ್ಳಾರಿಯಲ್ಲಿ ಮಾಡೋಕೆ ಬೇಕಾದಷ್ಟು ಕೆಲಸವಿದೆ. ಬೆಂಗಳೂರಿಗೆ ಹೋಗಿ ಯಾರನ್ನು ಭೇಟಿಯಾಗಿ ಏನು ಮಾಡಲಿ? ಅಸಮಾಧಾನ ಇರುವುದು ನಿಜ. ಆದರೆ ಕೊರೊನಾ ಸಮಯದಲ್ಲಿ ಅದನ್ನು ವ್ಯಕ್ತಪಡಿಸುವ ಅವಶ್ಯಕತೆ ಇಲ್ಲ. ಯಡಿಯೂರಪ್ಪನವರೇ ಮುಂದಿನ ಎರಡು ವರ್ಷಗಳ ಕಾಲ ಸಿಎಂ ಆಗಿ ಮುಂದುವರೆದರೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಈಶ್ವರಪ್ಪನವರಷ್ಟು ಒಳ್ಳೆಯ ಮನುಷ್ಯ ಯಾರೂ ಇಲ್ಲ: ರಮೇಶ್ ಜಾರಕಿಹೊಳಿ