ಬಳ್ಳಾರಿ: ಭಕ್ತರ ವಿರೋಧದ ನಡುವೆಯೇ ರಥಬೀದಿಯಲ್ಲಿ ಸಚಿವರ ಕಾರು ಪಾರ್ಕಿಂಗ್ ಮಾಡಲಾಗಿದ್ದು, ನಾನಾ ಅವಾಂತರಗಳು ಸೃಷ್ಟಿಯಾದ ಘಟನೆ ಜಿಲ್ಲೆಯ ಹಡಗಲಿ ತಾಲೂಕಿನ ಮಾನ್ಯರ ಮಸಲವಾಡ ಗ್ರಾಮದಲ್ಲಿ ನಡೆದಿದೆ.
ಮಾನ್ಯರ ಮಸಲವಾಡ ಗ್ರಾಮದಲ್ಲಿ ನಡೆದ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಪಾಲ್ಗೊಂಡಿದ್ದರು. ಅವರು ಬಂದಿದ್ದ ಸರ್ಕಾರಿ ಕಾರನ್ನು ರಥ ಬೀದಿಯಲ್ಲಿ ಪಾರ್ಕಿಂಗ್ ಮಾಡಲು ಹೊರಟಾಗ ಗ್ರಾಮಸ್ಥರು ಈ ಬೀದಿಯಲ್ಲಿ ಕಾರು ನಿಲ್ಲಿಸಬೇಡಿ. ರಥ ಮೆರವಣಿಗೆ ಬರಲಿದೆ ಎಂದಿದ್ದಾರೆ. ಆದರೂ ಮಾತು ಕೇಳದ ಸಚಿವರು ತಮ್ಮ ಕಾರನ್ನು ರಥ ಬೀದಿಯಲ್ಲೇ ನಿಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲು ದೇಗುಲದ ಒಳಗೆ ಹೋಗಿದ್ದಾರೆ ಎನ್ನಲಾಗಿದೆ.
ನಂತರ ತೇರನ್ನು ಎಳೆಯುವ ಸಂದರ್ಭದಲ್ಲಿ ರಥ ತಾಗಿ ಕಾರು ಜಖಂಗೊಂಡಿದೆ. ಈ ವೇಳೆ ಕಾರಿನ ಚಾಲಕ ಅಲ್ಲಿಂದ ಕಾಲ್ಕೀಳಲು ಹೋಗಿ ತೇರಿನ ಮುಂದೆ ನಿಂತವರು ಕೂಡ ಚರಂಡಿಯೊಳಗೆ ಬಿದ್ದು, ಸಣ್ಣಪುಟ್ಟದಾಗಿ ಗಾಯಗೊಂಡಿದ್ದಾರೆ. ಇನ್ನು ಇದರಿಂದಾಗಿ ರೊಚ್ಚಿಗೆದ್ದ ಭಕ್ತರು ಕಾರಿನ ಚಾಲಕನನ್ನು ಹಿಡಿದು ಥಳಿಸಿದ ಪರಿಣಾಮ ಪೊಲೀಸರು ಕುಪಿತಗೊಂಡು ಲಘು ಲಾಠಿ ಪ್ರಹಾರ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇನ್ನು ಜಖಂಗೊಂಡಿದ್ದ ಸಚಿವರ ಕಾರನ್ನು ಬೇರೆಡೆಗೆ ಸ್ಥಳಾಂತರಿಸಿದ್ದು, ಸಚಿವರು ಅಲ್ಲಿಂದ ನಿರ್ಗಮಿಸಲು ಮಗದೊಂದು ಕಾರನ್ನ ತರಿಸಿಕೊಂಡರು ಎಂದು ತಿಳಿದುಬಂದಿದೆ.