ಬಳ್ಳಾರಿ: ಸಚಿವ ಆನಂದ್ ಸಿಂಗ್ ರಾಜಕೀಯ ಮಾಡೋದನ್ನ ಚೆನ್ನಾಗಿ ಕಲಿತಿದ್ದಾನೆ. ನನ್ನ ಸಹೋದರ ಗಾಲಿ ಜನಾರ್ದನ ರೆಡ್ಡಿ ಆತನಿಗೆ ಚೆನ್ನಾಗಿ ರಾಜಕೀಯ ಮಾಡೋದನ್ನ ಕಲಿಸಿದ್ದಾನೆಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ವ್ಯಂಗ್ಯವಾಡಿದ್ದಾರೆ.
ಬಳ್ಳಾರಿ ನಗರದ ತಾಳೂರು ರಸ್ತೆಯಲ್ಲಿಂದು ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಇಲ್ಲೊಂದು ಅಲ್ಲೊಂದು ಮಾತನಾಡುತ್ತಾನೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಆತನನ್ನು ರಾಜಕೀಯಕ್ಕೆ ಕರೆತಂದು ತಪ್ಪು ಮಾಡಿದರು ಎಂದು ಟಾಂಗ್ ನೀಡಿದರು.
ಬಳ್ಳಾರಿ ಜಿಲ್ಲಾ ಉಸ್ತುವಾರಿ ಬಿಟ್ಟು ಕೊಡುವುದಲ್ಲ, ನಾವೇ ಬೇಡ ಅಂತಾ ಹೇಳಿದ್ದೇವೆ. ಈ ಜಿಲ್ಲೆ ಇಬ್ಭಾಗ ಮಾಡಿದವರು ಜಿಲ್ಲಾ ಉಸ್ತುವಾರಿ ಸಚಿವರಿರುವುದು ನಮಗೆ ಇಷ್ಟ ಇಲ್ಲ. ಇದನ್ನ ಸಿಎಂ ಬಿಎಸ್ವೈ ಗಮನಕ್ಕೆ ತಂದಿದ್ದೇನೆ. ಶ್ರೀರಾಮುಲು ಅವರು ಬಳ್ಳಾರಿ ಜಿಲ್ಲಾ ಉಸ್ತುವಾರಿಯಾದ್ರೆ ನಮಗೆ ಒಳ್ಳೆಯದು. ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರ ಅವಧಿಯಲ್ಲಿ ಅದಂತಹ ಅಭಿವೃದ್ಧಿ ಆಗುತ್ತೆ. ರಾಮಮಂದಿರದಲ್ಲಿ ಶ್ರೀರಾಮನ ದೇವಸ್ಥಾನ ನಿರ್ಮಾಣವಾಗುತ್ತೆ. ಇತ್ತ ಬಳ್ಳಾರಿಗೆ ರಾಮುಲು ಬಂದ್ರೆ ಒಳ್ಳೆದಾಗುತ್ತೆ. ಸಚಿವ ಆನಂದಸಿಂಗ್ ಒಳಗೊಂದು- ಹೊರಗೊಂದು ಮಾತನಾಡುತ್ತಾರೆ. ಅಖಂಡ ಜಿಲ್ಲೆಗಾಗಿ ಕಾನೂನು ಹೋರಾಟ ನಡೆಸುವವರಿಗೆ ನನ್ನ ಸಂಪೂರ್ಣ ಸಹಕಾರ ಇದೆ ಎಂದು ಹೇಳಿದರು.