ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನ ಜಿಂದಾಲ್ ಸಮೂಹ ಸಂಸ್ಥೆಗೆ ಅಂದಾಜು 3,667 ಎಕರೆ ಭೂಮಿಯನ್ನ ಪರಭಾರೆ ಮಾಡಿರೋದು ನ್ಯಾಯಯುತವಾಗಿದೆ ಎಂದು ಸಂಡೂರಿನ ಶಾಸಕ ಈ.ತುಕಾರಾಂ ಹೇಳಿದ್ದಾರೆ.
ಸಂಡೂರು ಪಟ್ಟಣದ ಸರ್ಕಾರಿ ಪ್ರವಾಸಿ ಮಂದಿರದಲ್ಲಿಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಚಾರವಾಗಿ ಈಗಾಗಲೇ ನಾನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿರುವೆ. ಅವರು ನನಗೆ ನ್ಯಾಯಯುತವಾಗಿರುವ ಅಂಶಗಳನ್ನ ಒಳಗೊಂಡಂತಹ ಕಡತಗಳನ್ನ ತೆಗೆದುಕೊಂಡು ಬನ್ನಿ ಮಾತನಾಡೋಣ ಎಂದಿದ್ದಾರೆ. ಜಿಂದಾಲ್ ಸಮೂಹ ಸಂಸ್ಥೆಗೆ ಭೂಮಿ ಪರಭಾರೆ ವಿಚಾರವನ್ನ ಈ ರಾಜ್ಯ ಸರ್ಕಾರ ಕೈಬಿಟ್ಟಿರುವ ಬಗ್ಗೆ ನಾನೇ ಕಲಾಪದಲ್ಲಿ ಮಾತನಾಡುವೆ. ಸದ್ಯ ಕಲಾಪ ಇಲ್ಲ. ಮುಂದೆ ಇದನ್ನ ನಾನು ರೈಸ್ ಮಾಡುವೆ ಎಂದರು.
ಕಳೆದ 2008ರ ಸಮ್ಮಿಶ್ರ ಸರ್ಕಾರದ ಸಿಎಂ ಆಗಿದ್ದ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಆಗಿದ್ದ ಬಿ.ಎಸ್.ಯಡಿಯೂರಪ್ಪನವರ ಅಧಿಕಾರದ ಅವಧಿಯಲ್ಲಿ ಈ ಲೀಸ್ ಕಂ ಸೇಲ್ ಡೀಡ್ ಆಗಿತ್ತು. ಅಂದಿನ ಸರ್ಕಾರದಲ್ಲಿ ಎಲ್ಲರೂ ಒಪ್ಪಿದ್ದರು. ಈಗ್ಯಾಕೆ ಅಪೋಸ್ ಮಾಡುತ್ತಿದ್ದಾರೆ ಅಂತ ಗೊತ್ತಿಲ್ಲ. ಇದು ಲೀಗಲ್ ಆಗಿ ಸಮಸ್ಯೆ ಆಗುತ್ತೆ. ಬಹಳ ಎಚ್ಚರಿಕೆ ವಹಿಸಿ ಭೂಮಿ ಪರಭಾರೆ ಮಾಡಲೇಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ಸತ್ಯಾಂಶವನ್ನ ಅರಿತುಕೊಂಡು ಮಾತಾಡಬೇಕು. ತಾವೊಬ್ಬರು ಇಂಡಸ್ಟ್ರಿಯಲಿಸ್ಟ್ ಆಗಿ ದೂರಾಲೋಚನೆ ಮಾಡಬಾರದು. ರಾಜಕಾರಣ ಎಲ್ಲ ಸಂದರ್ಭದಲ್ಲೂ ಮಾಡೋದು ಸರಿಯಲ್ಲ. ಮ್ಯಾನಿಫೆಸ್ಟೋ ಏನಿದೆ ಅದರಂತೆಯೇ ನುಡಿಯಬೇಕು, ನಡೆಯಬೇಕು ಎಂದರು.