ಬಳ್ಳಾರಿ : ಜನ ಅಭಿವೃದ್ಧಿ ಪರವಾಗಿ ಮತ ನೀಡಿದ್ದಾರೆ. ಹು-ಧಾ, ಬೆಳಗಾವಿ ಮಹಾನಗರ ಪಾಲಿಕೆ ಮತದಾರ ನಮ್ಮ ಕೈ ಹಿಡಿದಿದ್ದಾರೆ. ಬೆಳಗಾವಿಯಲ್ಲಿ 25 ವರ್ಷಗಳ ಬಳಿಕ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ಹು-ಧಾ ಚುನಾವಣೆಯಲ್ಲಿ ನಾವು ಹ್ಯಾಟ್ರಿಕ್ ಗೆಲುವು ಸಾಧಿಸಿದ್ದೇವೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ಸಿದ್ದರಾಮಯ್ಯ ಜಾತಿ ನಾಯಕ : ನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಜಾತ್ಯಾತೀತ ನಾಯಕ ಅಲ್ಲ, ಅವರೊಬ್ಬ ಜಾತಿ ನಾಯಕ ಎಂದು ವಾಗ್ದಾಳಿ ನಡೆಸಿದ್ರು. ಚುನಾವಣೆ ಬಂದಾಗ ಮಾತ್ರ ಸಿದ್ದರಾಮಯ್ಯ ಅವರಿಗೆ ಜಾತಿ ನೆನಪಾಗುತ್ತೆ ಎಂದ್ರು.
ಬಿಜೆಪಿ ಜಾತಿ ಹಿಡಿದು ರಾಜಕೀಯ ಮಾಡಿಲ್ಲ : ಬಿಜೆಪಿ ಜಾತಿ ಹಿಡಿದು ರಾಜಕೀಯ ಮಾಡಿಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಜಾತಿ ಸಮೀಕ್ಷೆ ಕೊಟ್ಟಿಲ್ಲ. ತಮ್ಮದೇ ಸಮ್ಮಿಶ್ರ ಸರ್ಕಾರ ಇದ್ದಾಗ ಕುಮಾರಸ್ವಾಮಿ ಸಿಎಂ ಜಾತಿ ಸಮೀಕ್ಷೆ ನೀಡಿಲ್ಲ. ಸಿದ್ದರಾಮಯ್ಯ ಅವ್ರಿಗೆ ಚುನಾವಣೆ ಬಂದ್ರೆ ಅಷ್ಟೇ ಜಾತಿ ಸಮೀಕ್ಷೆ, ಅಹಿಂದ ಕುರಿತು ನೆನಪಾಗುತ್ತೆ ಎಂದರು.
ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು : ಸಿಎಂ ಬಸವರಾಜ ಬೊಮ್ಮಾಯಿ ಎಲ್ಲ ಗೈಡ್‌ಲೈನ್ಸ್ ಮೂಲಕ ಶಾಲೆ-ಕಾಲೇಜು ಆರಂಭಿಸಿದ್ದಾರೆ. ಕಾಂಗ್ರೆಸ್ ಏನೇ ಬೊಬ್ಬೆ ಹೊಡೆದುಕೊಳ್ಳಲಿ. ಆದರೆ, ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು. ಅದಕ್ಕಾಗಿಯೇ ರಾಜ್ಯದಲ್ಲಿ ಇಂದಿನಿಂದ ಶಾಲೆ ಆರಂಭವಾಗಿದೆ ಎಂದು ಹೇಳಿದರು.
2023ರ ಚುನಾವಣೆಗೆ ಸಿದ್ಧತೆ : 2023ರ ಸಾರ್ವತ್ರಿಕ ಚುನಾವಣೆಗೆ ಸಿದ್ಧತೆ ಮಾಡಲಾಗುತ್ತಿದೆ. ಕಾಂಗ್ರೆಸ್ ಅಧಿಕಾರದ ಹಗಲುಗನಸು ಕಾಣುತ್ತಿದೆ. ಬೆಳಗಾವಿಯಲ್ಲಿ ಬಹಳ ವರ್ಷದಿಂದ ಪಾಲಿಕೆಯಲ್ಲಿ ಅಧಿಕಾರದಲ್ಲಿ ಇರಲಿಲ್ಲ. ಸಿಎಂ ಬೊಮ್ಮಾಯಿ ಅಭಿವೃದ್ಧಿ ಪರವಾದ ಕೆಲಸ ಮಾಡುತ್ತಿದ್ದಾರೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೆಲಸ ಮಾಡಿದ್ದಾರೆ. ಕೆಲ ಬಾರಿ ಸ್ಥಾನಗಳು ಹೆಚ್ಚು ಕಡಿಮೆ ಆಗುತ್ತದೆ ಎಂದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 1500 ಕೋಟಿ : ಕಲಬುರಗಿಯಲ್ಲಿ ಮುಂಚೆಯಿಂದಲೂ ಪ್ರಚಾರ ಮಾಡಲಾಗುತ್ತಿದೆ. ಅಲ್ಲಿ ಕಾಂಗ್ರೆಸ್ ನ ದೊಡ್ಡ ಶಕ್ತಿ ಇದೆ. ಆದರೂ ನಮ್ಮ ಕಾರ್ಯಕರ್ತರು ಕಷ್ಟ ಪಟ್ಟಿದ್ದಾರೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಾಡಲೆಂದೇ 1500 ಕೋಟಿ ಅನುದಾನ ಮೀಸಲಿಡಲಾಗಿದೆ. ಈಗಾಗಲೇ 500 ಕೋಟಿ ಖರ್ಚು ಮಾಡಲಾಗಿದೆ. ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿನ ಹಿನ್ನಡೆ ಕುರಿತು ನಾನು ನಾಯಕರೊಂದಿಗೆ ಚರ್ಚೆ ಮಾಡುತ್ತೇನೆ ಎಂದರು.
ಇದನ್ನೂ ಓದಿ:ಬಿಜೆಪಿಗೆ ಸಿಹಿ.. ಎಂಇಎಸ್ ಪಾಲಿಗೆ ಕುಂದಾ ಕಹಿ.. ಬೆಳಗಾವಿಯಲ್ಲಿ ಯಶಸ್ವಿಯಾದ ಕಮಲಪಾಳಯದ ತಂತ್ರ!