ಬಳ್ಳಾರಿ: ತಾಲೂಕಿನ ಬಿ ಡಿ ಹಳ್ಳಿ ಬಳಿಯ ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮೇಲು ಸೇತುವೆಯ ಎಲ್‍ಎಲ್‍ಸಿ ಕಾಲುವೆಯ ದುರಸ್ತಿ ಕೆಲಸ ನಡೆಯುತ್ತಿದೆ. ಈ ಕಾಮಗಾರಿಗೆ ವೇಗ ಸಿಗಲೆಂದು ಮಂಗಳವಾರ ರಾತ್ರಿ ನದಿ ಬಳಿಯೇ ಹಾಸಿಗೆ ಹಾಸಿಕೊಂಡು ಮಲಗುವ ಮೂಲಕ ಸಚಿವ ಶ್ರೀರಾಮುಲು ಗಮನ ಸೆಳೆದರು.
ಭದ್ರಾ ನದಿ ಮತ್ತು ವಾಣಿವಿಲಾಸ ಸಾಗರ ಪಾತ್ರದಲ್ಲಿ ಭಾರಿ ಮಳೆಯಿಂದಾಗಿ ಸುಮಾರು 1 ಲಕ್ಷ ಕ್ಯೂಸೆಕ್ ನೀರನ್ನು ವೇದಾವತಿ ನದಿಗೆ ಹರಿಸಲಾಗಿದೆ. ಕರ್ನಾಟಕ ಮತ್ತು ಆಂಧ್ರ ಗಡಿಭಾಗಕ್ಕೆ ಸಂಪರ್ಕ ಕಲ್ಪಿಸುವ ಹಳೆಯ ಸೇತುವೆಯಲ್ಲಿ ಒಟ್ಟು 58 ಪಿಲ್ಲರ್ಗಳಿದ್ದು, 10ನೇ ಪಿಲ್ಲರ್ ದುರಸ್ತಿಗೊಂಡಿದೆ. 15ನೇ ಪಿಲ್ಲರ್ ಸಂಪೂರ್ಣವಾಗಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಇದರಿಂದ ಎಲ್‍ಎಲ್‍ಸಿ ಕಾಲುವೆ ದುರಸ್ತಿಗೆ ಒಳಗಾಗಿದ್ದು, ರೈತರ ಬೆಳೆಗಳಿಗೆ ನೀರು ಒದಗಿಸಲು ಈಗ ತಾತ್ಕಾಲಿಕವಾದ ಪಿಲ್ಲರ್ ನಿರ್ಮಾಣ ಮಾಡಲಾಗುತ್ತಿದೆ.
ಕಾಲುವೆಯ ಮೂಲಕ ತಮ್ಮ ಜಮೀನುಗಳಿಗೆ ನೀರು ಪಡೆಯುವ ರೈತರು, ಲಕ್ಷಾಂತರ ಎಕರೆ ಬೆಳೆ ಹಾನಿಗೀಡಾಗುವ ಭೀತಿಯಲ್ಲಿದ್ದಾರೆ. ಹೀಗಾಗಿ, ಈ ಕಾಲುವೆ ರಿಪೇರಿ ತುರ್ತಾಗಿ ನಡೆಯಬೇಕು, ಕಾಮಗಾರಿ ಪೂರ್ಣಗೊಂಡ ನಂತರವೇ ಸ್ಥಳದಿಂದ ನಾನು ತೆರಳುವುದು, ಅಲ್ಲಿವರೆಗೆ ಇಲ್ಲಿಯೇ ಮೊಕ್ಕಾಂ ಹೂಡುವುದಾಗಿ ತಿಳಿಸಿದ ಸಚಿವ ಶ್ರೀರಾಮುಲು, ಸ್ಥಳದಲ್ಲೇ ರಾತ್ರಿ ನಿದ್ರೆಗೆ ಜಾರಿದರು.
ಇದನ್ನೂ ಓದಿ: ಅವರಿವರು ಕಟ್ಟೋ ಗೂಡಲ್ಲಿ ರಾಜಕಾರಣ ಮಾಡೋರು ಸಿದ್ದರಾಮಯ್ಯ: ಸಚಿವ ಬಿ ಶ್ರೀರಾಮುಲು
ಕಾಮಗಾರಿ ಸ್ಥಳದಲ್ಲಿ ಸಚಿವರ ಬೆಂಬಲಿಗರು, ಪೊಲೀಸ್ ಸಿಬ್ಬಂದಿ, ಗುತ್ತಿಗೆದಾರರು, ಕಾರ್ಮಿಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದಾರೆ.