ಬಳ್ಳಾರಿ: ರಾಜ್ಯದ ಎರಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರಾ..? ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.
ನಗರದ ಸಿರುಗುಪ್ಪ ರಸ್ತೆಯಲ್ಲಿರುವ ಅವಂಬಾವಿಯ ತಮ್ಮ ನಿವಾಸದಲ್ಲಿ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಿರಾ ಮತ್ತು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಂಡು ಬಂದ್ರೆ ಮುಂಬರುವ ದಿನಗಳಲ್ಲಿ ಮುಖ್ಯಮಂತ್ರಿ ಆಗುವ ಹಗಲುಗನಸು ಕಾಣುತ್ತಿದ್ದಾರೆ. ಇಲ್ಲೇನೋ ಸಿಎಂ ಕುರ್ಚಿ ಖಾಲಿಯಿದೆ ಎಂದು ತಿಳಿದು ಕೊಂಡಿದ್ದಾರೆ. ಬಿ.ಎಸ್ ಯಡಿಯೂರಪ್ಪ ಈಗಾಗಲೇ ಆ ಕುರ್ಚಿಯನ್ನ ಅಲಂಕರಿಸಿದ್ದಾರೆ. ಅದನ್ನು ಅರಿತುಕೊಂಡು ಡಿ.ಕೆ ಶಿವಕುಮಾರ್ ಮುನ್ನಡೆಯಬೇಕು ಎಂದರು.
ಶಿರಾ ಮತ್ತು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಅಭ್ಯರ್ಥಿಗಳೇ ಗೆಲ್ಲೋದು. ಚುನಾವಣಾ ಫಲಿತಾಂಶದವರೆಗೆ ಕಾದು ನೋಡಿ. ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವಿನ ಒಣ ಪ್ರತಿಷ್ಠೆಯಿಂದಲೇ ಈ ಎರಡು ಕ್ಷೇತ್ರಗಳು ಜಿದ್ದಾ ಜಿದ್ದಿನ ಕಣಗಳಾಗಿ ಮಾರ್ಪಟ್ಟಿವೆ. ಅವರಿಬ್ಬರ ನಡುವಿನ ಒಳ ಜಗಳ ನಮಗೆ ವರದಾನವಾಗಲಿದೆ ಎಂದು ಹೇಳಿದರು.
ವಿಜಯೇಂದ್ರ ಕೈ ಇಟ್ಟಲೆಲ್ಲಾ ಗೆಲುವು : ಸಿಎಂ ಬಿಎಸ್ವೈ ಅವರ ಪುತ್ರ ವಿಜಯೇಂದ್ರ ಕೈ ಇಟ್ಟಲೆಲ್ಲಾ ಬಿಜೆಪಿ ಗೆಲುವು ಖಚಿತವಾಗಿದೆ. ಅದರಂತೆಯೇ ಶಿರಾ ಹಾಗೂ ಆರ್. ಆರ್ ನಗರ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲುವು ಸಾಧಿಸಲಿದೆ. ವಿಜಯೇಂದ್ರ ಅವರಂತಹ ಯುವ ನಾಯಕರು ಪಕ್ಷದಲ್ಲಿ ಇನ್ನೂ ಎತ್ತರಕ್ಕೆ ಬೆಳೆಯ ಬೇಕು ಎಂದರು.