ಬಳ್ಳಾರಿ: ಹತಾಶೆಯ ಮನೋಭಾವನೆಯಿಂದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡುತ್ತಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿ ಯತ್ನಾಳ್ ಹತಾಶೆಯಿಂದ ಮಾತನಾಡುತ್ತಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಗೆ ಹೀನಾಯ ಸೋಲಾಗಲಿದೆ. ಈ ಭಯದಿಂದ ಆ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ದುರ್ಬಲವಾಗುವ ಪ್ರಶ್ನೆ ಇಲ್ಲ. ನಮ್ಮ ನಾಯಕತ್ವ ನಮ್ಮ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಪಕ್ಷಕ್ಕೆ ಬಂದರೆ ಅದರಲ್ಲಿ ತಪ್ಪೇನು?. ನಾವು ಬಿಜೆಪಿಗರ ರೀತಿ ಆಪರೇಷನ್ ಕಮಲ ಮಾಡಿಲ್ಲ. ಆಪರೇಷನ್ ಹಸ್ತ ಮಾಡುವ ಅಗತ್ಯತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ಯಾರಾದರೂ ಸ್ವಯಂ ಇಚ್ಛೆಯಿಂದ ಪಕ್ಷಕ್ಕೆ ಬರುವುದಾಗಿ ಹೇಳಿದರೆ ನಮ್ಮ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದರು.
ಲಾಟರಿ ಮೂಲಕ ಸರ್ಕಾರ ಬಂದಿದೆ ಎಂಬ ಮಾಜಿ ಸಚಿವ ಶ್ರೀರಾಮುಲು ಹೇಳಿಕೆ ಪ್ರತಿಕ್ರಿಯಿಸಿದ ಅವರು, ಶ್ರೀರಾಮುಲು ಅವರ ಒಳ ಮನಸ್ಸಿನಲ್ಲೇ ಕಾಂಗ್ರೆಸ್ ಸೇರ್ಪಡೆ ಆಗಬೇಕೆಂಬ ಆಸೆ ಇದೆ ಎಂದು ಹೇಳಿದರು.
ಅರಣ್ಯ ಸಚಿವರಾಗಿ ಮೊದಲ ಬಾರಿಗೆ ಬಳ್ಳಾರಿಗೆ ಭೇಟಿ ನೀಡಿದ ಸಚಿವ ಈಶ್ವರ್ ಖಂಡ್ರೆ, ವಿಜಯನಗರ ಮತ್ತು ಬಳ್ಳಾರಿಯಲ್ಲಿ ಎರಡೂ ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ಈಗಾಗಲೇ ಮಾಡಿದ್ದೇನೆ. ಇಂದು ಕೂಡ ಸಭೆ ನಡೆಸಲಾಗಿದೆ. ಅರಣ್ಯ ಸಂರಕ್ಷಣೆ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಇಂದು ನಾವು ಹಮ್ಮಿಕೊಂಡಿದ್ದೇವೆ ಎಂದು ಸಚಿವರು ತಿಳಿಸಿದರು.
ವನಮಹೋತ್ಸವ ನಿಮಿತ್ತ ರಾಜ್ಯಾದ್ಯಂತ 5 ಕೋಟಿ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ನಮ್ಮ ಸರ್ಕಾರವು ಬುಡಕಟ್ಟು ಜನರ, ಅರಣ್ಯವಾಸಿಗಳ ಸಮಸ್ಯೆಗಳನ್ನು ನಿವಾರಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಜೊತೆಗೆ ಪರಿಸರ ಮಾಲಿನ್ಯದ ಬಗ್ಗೆಯೂ ಹೆಚ್ಚಿನ ಜಾಗೃತಿ ಮೂಡಿಸುವ ಬಗ್ಗೆಯೂ ಸಂಕಲ್ಪ ಮಾಡಲಾಗಿದೆ ಎಂದು ಹೇಳಿದರು.
ಪ್ಲಾಸ್ಟಿಕ್ ಮುಕ್ತ ರಾಜ್ಯವನ್ನಾಗಿ ಮಾಡಲು ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ. ಈ ಸಂಬಂಧ ಈಗಾಗಲೇ ಐದು ನಗರಗಳನ್ನು ಪ್ಲಾಸ್ಟಿಕ್ ಮುಕ್ತ ನಗರ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಎಲ್ಲರೂ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಮಾಡಬೇಕು. ಈ ವೇಳೆ ಪಿಒಪಿ ಗಣೇಶನ ಪ್ರತಿಷ್ಠಾಪನೆ ಬದಲು ಮಣ್ಣಿನ ಗಣೇಶನನ್ನು ಪ್ರತಿಷ್ಠಾಪಿಸಿ ಎಂದು ಮನವಿ ಮಾಡಿದರು.
ಯಾರಿಗೂ ತೊಂದರೆ ಆಗದಂತೆ ರಾಜ್ಯದಲ್ಲಿ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ಮಾಡಲಾಗುತ್ತದೆ. ಜೊತೆಗೆ ರಾಜ್ಯದ ವಿವಿದೆಡೆ ಮಾನವ ಪ್ರಾಣಿ ಸಂಘರ್ಷ ನಡೆಯುತ್ತಿದೆ. ಈ ಸಂಬಂಧ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿದ್ದೆ. ಇದುವರೆಗೆ 28 ಜನ ಮೃತಪಟ್ಟಿದ್ದಾರೆ. ಈ ಸಂಬಂಧ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲೂ ಕರಡಿ ದಾಳಿಯಿಂದ ನಾಲ್ಕು ಜನ ಮೃತಪಟ್ಟಿದ್ದಾರೆ. ಈ ಬಗ್ಗೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ : ಭಾರತ ಎಂದರೆ ಇಂಡಿಯಾ, ಇಂಡಿಯಾ ಎಂದರೆ ಭಾರತ ಅನ್ನೋದು ಸಣ್ಣ ಮಗುವಿಗೂ ಗೊತ್ತಿದೆ: ಯು.ಟಿ.ಖಾದರ್