ಬಳ್ಳಾರಿ: ಬಳ್ಳಾರಿ-ಹಾವೇರಿ ಜಿಲ್ಲೆಗಳಲ್ಲಿ ಅಕ್ರಮ ಮರಳುಗಾರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗುವಂತೆ ಖಡಕ್ ಸೂಚನೆ ನೀಡಿದ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ್, ವೃತ್ತಿಪರ ಅಕ್ರಮ ಮರಳುಕೋರರ ಮೇಲೆ ಚಾಟಿ ಬೀಸಿ ಎಂದು ಆದೇಶಿಸಿದರು.
ಹೊಸಪೇಟೆ ನಗರದ ಅಮರಾವತಿ ಪ್ರವಾಸಿ ಮಂದಿರದಲ್ಲಿಂದು ಮಧ್ಯಾಹ್ನ ಹಾವೇರಿ ಮತ್ತು ಬಳ್ಳಾರಿ ಜಿಲ್ಲೆಗಳ ಮರಳು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಕ್ರಮ ಮರಳುಕೋರರ ವಿರುದ್ಧ ಯಾವುದೇ ರೀತಿಯ ಮುಲಾಜಿಲ್ಲದೇ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಹಾಗೂ ರಾಜ್ಯ ಸರ್ಕಾರಕ್ಕೆ ಸೂಕ್ತ ರಾಯಧನ ಬರುವಂತೆ ನೋಡಿಕೊಳ್ಳಿ. ತಹಸೀಲ್ದಾರರು, ಸಹಾಯಕ ಆಯುಕ್ತರು, ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮಾರ್ಗದರ್ಶನ ಮತ್ತು ಸಹಕಾರದಲ್ಲಿ ಅಕ್ರಮ ಮರಳುಗಣಿಗಾರಿಕೆ ತಡೆಯುವುದಕ್ಕೆ ಮುಂದಾಗಬೇಕು ಎಂದರು.
ಇನ್ನೂ ಸಚಿವರು ಹೇಳಿದ್ದಾರೆ ಎಂದು ಸಣ್ಣಪುಟ್ಟ ಮನೆ ಕೆಲಸಗಳಿಗೆ ಅಲ್ಪಸ್ವಲ್ಪ ಮರಳು ತೆಗೆದುಕೊಂಡು ಹೋಗುವವರ ಮೇಲೆ ತಮ್ಮ ಪ್ರಕರಣಗಳ ಪ್ರಯೋಗ ಮಾಡದಿರಿ. ಅಂತವರ ವಿಷಯದಲ್ಲಿ ಸ್ವಲ್ಪ ಉದಾರತೆಯೂ ಇರಲಿ ಎಂಬ ಸಲಹೆಯನ್ನು ಸಚಿವ ಪಾಟೀಲರು ವ್ಯಕ್ತಪಡಿಸಿದರು. ಇದೇ ವೇಳೆ ಅಕ್ರಮ ಮರಳು ಸಾಗಾಣಿಕೆ ಮಾಡುವುದಕ್ಕೆ ಅನುಕೂಲ ಮಾಡಿಕೊಡುವವ ಜಮೀನು ಮಾಲೀಕರಿಗೂ ಸಹ ನೋಟಿಸ್ ಜಾರಿ ಮಾಡಿ ಎಂದರು.
ಬಳ್ಳಾರಿ, ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ಸಾಕಷ್ಟು ಪ್ರಮಾಣದ ಮರಳು ಲಭ್ಯವಿದ್ದು, ಮರಳು ಲಭ್ಯವಿರದ ಜಿಲ್ಲೆಗಳಿಗೆ ತಮ್ಮಲ್ಲಿ ಲಭ್ಯವಿರುವ ಮರಳಿನ ಬಗ್ಗೆ ಮಾಹಿತಿ ನೀಡಿ ಒದಗಿಸುವ ಕೆಲಸ ಮಾಡಿ ಎಂದರು.
ಇದೇ ವೇಳೆ ಮರಳು ಅತ್ಯಂತ ಸುಲಭವಾಗಿ ಕೈಗೆಟುಕುವ ದರದಲ್ಲಿ ಲಭ್ಯವಾಗಬೇಕು ಎಂಬುದು ಸರ್ಕಾರದ ಉದ್ದೇಶ. ಆ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಹಾವೇರಿ ಮತ್ತು ಬಳ್ಳಾರಿ ಜಿಲ್ಲೆಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಕೇಂದ್ರೀಕೃತ ಜಿಪಿಎಸ್ ವ್ಯವಸ್ಥೆ ಮತ್ತು ಆ್ಯಪ್ ಇಲಾಖೆಯಿಂದ ಅಭಿವೃದ್ಧಿ:
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಕೇಂದ್ರೀಕೃತ ಜಿಪಿಎಸ್ ವ್ಯವಸ್ಥೆ ಹಾಗೂ ಮರಳಿನ ಸಮಗ್ರ ವಿಷಯದ ಕುರಿತ ಆ್ಯಪ್‌ನ್ನು ಅಭಿವೃದ್ಧಿಪಡಿಸಲಾಗುವುದು. ಈ ವ್ಯವಸ್ಥೆ ಜಾರಿಯಿಂದ ಮರಳಿನ ವಾಹನಗಳ ಮಾಹಿತಿ ಲಭ್ಯವಾಗುತ್ತದೆ. ಇನ್ನೂ ಆ್ಯಪ್ ಅಭಿವೃದ್ಧಿಪಡಿಸುವುದರಿಂದ ಯಾವ ಯಾವ ಬ್ಲಾಕ್‌ಗಳಲ್ಲಿ ಮರಳು ಲಭ್ಯವಿದೆ, ಯಾವಾಗ ಖಾಲಿಯಾಗುತ್ತದೆ, ಮರಳು ಸಾಗಾಟ ಸೇರಿದಂತೆ ಮರಳಿಗೆ ಸಂಬಂಧಿಸಿದ ಸಮಗ್ರ ವಿವರ ಲಭ್ಯವಾಗುತ್ತದೆ ಎಂದು ಸಚಿವರು ತಿಳಿಸಿದರು.
ಮರಳು ಕರ ಸಂಗ್ರಹದ ವಿಷಯದಲ್ಲಿ ಹಾವೇರಿ ಸಾಧಾರಣ ಪ್ರಗತಿ ಸಾಧಿಸಿರುವುದಕ್ಕೆ ಅತೃಪ್ತಿ ಹೊರಹಾಕಿದ ಸಚಿವರು, ಮುಂದಿನ ದಿನಗಳಲ್ಲಿ ಸರಿದೂಗಿಸಿಕೊಂಡು ನಿಗದಿಪಡಿಸಿದ ಗುರಿ ಸಾಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಕ್ರಮ ಮರಳು ತಡೆಗಟ್ಟುವ ನಿಟ್ಟಿನಲ್ಲಿ ಗಣಿ ಇಲಾಖೆ, ಕಂದಾಯ, ಪೊಲೀಸ್, ಆರ್‌ಟಿಒ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ವಹಿಸಲಾದ ಜವಾಬ್ದಾರಿಯನ್ನು ಅತ್ಯಂತ ಸಮರ್ಪಕವಾಗಿ ನಿಭಾಯಿಸಿಕೊಂಡು ಹೋಗಬೇಕು ಎಂದು ಸೂಚಿಸಿದರು.
ಸಂಸದ ವೈ.ದೇವೇಂದ್ರಪ್ಪ, ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಹಾವೇರಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ ಮಹಾವೀರ ಸೇರಿದಂತೆ ಸದಸ್ಯರು ಪಾಲ್ಗೊಂಡಿದ್ದರು.