ಹೊಸಪೇಟೆ: ಅರಣ್ಯ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಬಿಡಿಸಿಸಿ ಬ್ಯಾಂಕ್). ಜಿಲ್ಲೆಯಲ್ಲಿ ತನ್ನದೇ ಆದ ವರ್ಚಸ್ಸು ಹಾಗೂ ವ್ಯಾಪ್ತಿಯನ್ನು ಹೊಂದಿದೆ. ಈ ಬ್ಯಾಂಕಿನ ಮೂಲಕ ಜಿಲ್ಲೆಯ ರೈತರಿಗೆ ಹತ್ತಿರವಾಗಲು ಆನಂದ್ ಸಿಂಗ್ ಹೊರಟಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ಆನಂದ್ ಸಿಂಗ್ ಸಹಕಾರ ಕ್ಷೇತ್ರಕ್ಕೆ ಎಂಟ್ರಿ ಯಾವಾಗ..?:
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಅಧ್ಯಕ್ಷರಾಗಲು, ಮೊದಲು ಸಹಕಾರ ಕ್ಷೇತ್ರದಲ್ಲಿ ಸದಸ್ಯ ಅಥವಾ ಅಧ್ಯಕ್ಷರಾಗಿರಬೇಕು. 2019 ಮಾರ್ಚ್ 26 ರಂದು ಹೊಸಪೇಟೆಯ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತಕ್ಕೆ ಆನಂದ ಸಿಂಗ್ ಮೊದಲಿಗೆ ಸದಸ್ಯರಾದರು. ಬಳಿಕ 2020 ಡಿಸೆಂಬರ್ 11 ರಂದು ಅದೇ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಪದಗ್ರಹಣ ಮಾಡಿದರು.
ಈಗ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಕ್ಷೇತ್ರ ಖಾಲಿ ಇರುವುದರಿಂದ ಚುನಾವಣೆ ಘೋಷಣೆ ಮಾಡಲಾಗಿತ್ತು. ಆ ಸ್ಥಾನಕ್ಕೆ ಆನಂದ್ ಸಿಂಗ್ ಒಬ್ಬರೇ ನಾಮಪತ್ರ ಸಲ್ಲಿಕೆ ಮಾಡಿದ್ದರು. ಹಾಗಾಗಿ ಚುನಾವಣಾಧಿಕಾರಿಯಾದ ವಿಶ್ವನಾಥ, ಆನಂದ್ ಸಿಂಗ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದ್ದರು.
ಬಿಡಿಸಿಸಿ ಬ್ಯಾಂಕ್ ಇತಿಹಾಸ:
ಬಿಡಿಸಿಸಿ ಬ್ಯಾಂಕ್ 1920 ರಲ್ಲಿ ಸ್ಥಾಪನೆ ಮಾಡಲಾಗಿದ್ದು, ಸತತ 100 ವರ್ಷಗಳಿಂದ ಜಿಲ್ಲೆಯ ರೈತರ ಸಾಲ ಸೌಲಭ್ಯವನ್ನು ಪೂರೈಸಿಕೊಂಡು ಬರುತ್ತಿದೆ. ಅಲ್ಲದೇ, ಸಾಲ ಹಂಚಿಕೆ, ವಸೂಲಾತಿ, ಠೇವಣಿ ಸಂಗ್ರಹಣೆಯಲ್ಲಿ ಗಮನಾರ್ಹ ಸಾಧನೆಯನ್ನು ಮಾಡಿಕೊಂಡು ಬಂದಿದೆ. ಬಳ್ಳಾರಿ ಜಿಲ್ಲೆಯ 11 ತಾಲೂಕುಗಳಲ್ಲಿ 33 ಶಾಖೆಗಳನ್ನು ಬ್ಯಾಂಕ್ ಹೊಂದಿದೆ. ಅದರಲ್ಲಿ 236 ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಪ್ರಸ್ತುತ ಬ್ಯಾಂಕಿನ ಠೇವಣಿ 1056 ಕೋಟಿ ರೂ.ಇದೆ. ಬ್ಯಾಂಕಿನ ಒಟ್ಟು ಬಂಡವಾಳ 1636.41 ಕೋಟಿ ರೂ. ಆಗಿದೆ. ಆಡಿಟ್ ವರ್ಗೀಕರಣದಲ್ಲಿ 2019-20 ಸಾಲಿನಲ್ಲಿ ಬ್ಯಾಂಕ್ ಎ ಗ್ರೇಡ್ ಪಡೆದುಕೊಂಡಿದೆ. ಕೃಷಿ ಸಾಲದ ವಸೂಲಾತಿಯಲ್ಲಿ ಶೇ 86.87 ರಷ್ಟು ಸಾಧನೆ ಮಾಡಲಾಗಿದೆ. ಬ್ಯಾಂಕಿನ ಒಟ್ಟಾರೆ ಸಾಲ ವಸೂಲಾತಿ ಪ್ರಮಾಣ ಶೇ 89.18 ರಷ್ಟು ಇದೆ.
ಸಹಕಾರ ಕ್ಷೇತ್ರಕ್ಕೆ ಆನಂದ ಸಿಂಗ್ ಒಲವು ತೋರಲು ಕಾರಣವೇನು..?:
ಬಿಡಿಸಿಸಿ ಬ್ಯಾಂಕ್ ಬಳ್ಳಾರಿ ಜಿಲ್ಲೆಯಲ್ಲಿ ಒಳ್ಳೆಯ ಹೆಸರನ್ನು ಗಳಿಸಿದೆ. ಅಲ್ಲದೇ, ಲಾಭದಾಯಕದತ್ತ ಹೆಜ್ಜೆ ಇಡುತ್ತಿದೆ. ಬಹುತೇಕ ರೈತರು ಬಿಡಿಸಿಸಿ ಬ್ಯಾಂಕ್ ಸಹಾಯವನ್ನು ನೆಚ್ಚಿಕೊಂಡಿದ್ದಾರೆ. ಈ ಬ್ಯಾಂಕ್ ಅಧ್ಯಕ್ಷರಾದರೆ ರೈತರಿಗೆ ಮತ್ತಷ್ಟು ಸಮೀಪವಾಗಬಹುದು. ಅಲ್ಲದೇ, ಜಿಲ್ಲೆಯಲ್ಲಿ ರಾಜಕೀಯ ಹಿಡಿತವನ್ನು ಸಾಧಿಸಿದಂತಾಗುತ್ತದೆ. ಇದು ಮುಂದಿನ ರಾಜಕೀಯ ಭವಿಷ್ಯಕ್ಕೆ ಸಹಕಾರಿಯಾಗಲಿದೆ ಎಂಬುದು ಆನಂದ್ ಸಿಂಗ್ ಲೆಕ್ಕಚಾರವಾಗಿದೆ ಎಂಬುದು ರಾಜಕೀಯ ನಾಯಕರ ಅಭಿಪ್ರಾಯವಾಗಿದೆ.
ಈ ಹಿಂದೆ ಎಂ.ಪಿ. ರವೀಂದ್ರ ಅವರು ಹಲವು ವರ್ಷಗಳ ಕಾಲ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದರು. ಬಳಿಕ ಅವರು ಅನಾರೋಗ್ಯದಿಂದ ಮೃತಪಟ್ಟರು. ನಂತರ ನಡೆದ ಚುನಾವಣೆಯಲ್ಲಿ ಟಿ.ಎಂ. ಚಂದ್ರಶೇಖರಯ್ಯ ಅವರು ಅಧ್ಯಕ್ಷರಾಗಿ ಚುನಾಯಿತರಾಗಿದ್ದರು.
ಈಟಿವಿ ಭಾರತ ದೊಂದಿಗೆ ಸಚಿವ ಆನಂದ್ ಸಿಂಗ್ ಮಾತನಾಡಿ, ಸಹಕಾರ ಕ್ಷೇತ್ರ ಬಹಳ ದೊಡ್ಡದು. ಅಲ್ಲಿ ರೈತರಿಗಾಗಿ ಬಹಳಷ್ಟು ಕೆಲಸ ಮಾಡಲು ಅವಕಾಶವಿದೆ. ಬಿಡಿಸಿಸಿ ಬ್ಯಾಂಕ್ಗೆ ಜಿಲ್ಲೆಯಲ್ಲಿ ಒಳ್ಳೆಯ ಹೆಸರು ಇದೆ. ಇನ್ನಷ್ಟು ಹೆಚ್ಚಿನ ಸಹಾಯವನ್ನು ರೈತರಿಗೆ ಮಾಡಬಹುದು ಎಂದು ಹೇಳಿದರು.