ಹೊಸಪೇಟೆ: ಒಂದು ಕಡೆ ಕೊರೊನಾ, ಇನ್ನೊಂದು ಕಡೆ ಮೀಸಲಾತಿ ಹೋರಾಟ, ಮತ್ತೊಂದು ಕಡೆ ಆರ್ಥಿಕ ಪರಿಸ್ಥಿತಿ. ಈ ಎಲ್ಲಾ ಒತ್ತಡದ ನಡುವೆ ಸಿಎಂ ಯಡಿಯೂರಪ್ಪ ಕೆಲಸ ಮಾಡುತ್ತಿದ್ದಾರೆ ಎಂದು ಹಜ್ ಮತ್ತು ವಕ್ಫ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಹೇಳಿದರು.
ಓದಿ: ಪಡಿಕಲ್, ಸಮರ್ಥ್ ಶತಕದಾಟ: ರೈಲ್ವೇಸ್ ವಿರುದ್ದ ಕರ್ನಾಟಕಕ್ಕೆ 10 ವಿಕೆಟ್ಗಳ ಭರ್ಜರಿ ಜಯ
ನಗರದ ಪಕ್ಷದ ಕಚೇರಿಯಲ್ಲಿಂದು ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು. ರಾಜ್ಯ ತೂಗಿಸಿಕೊಂಡು ಹೋಗೋದು ಅಷ್ಟು ಸುಲಭದ ಕೆಲಸವಲ್ಲ. ಎಲ್ಲಾ ಒತ್ತಡಗಳ ನಡುವೆ ಆಡಳಿತ ನಡೆಸಿಕೊಂಡು ಹೋಗುತ್ತಿರುವ ಯಡಿಯೂರಪ್ಪ ಗ್ರೇಟ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಜಯನಗರ ಜಿಲ್ಲೆ ರಚನೆಯಾದರೆ, ಸೌಲಭ್ಯ ತಪ್ಪುತ್ತದೆ ಅಂತ ಕೆಲವರು ದಾರಿ ತಪ್ಪಿಸೋ ಕೆಲಸ ಮಾಡಿದ್ದರು. ಈಗ 371 ಜೆ ಕಲಂ ಕೂಡ ಜಾರಿ ಆಯ್ತು, ಅಧಿಕಾರಿಗಳ ನೇಮಕವೂ ಆಯ್ತು ಎಂದರು.
ವಿಜಯನಗರ ಜಿಲ್ಲೆ, ಬಳ್ಳಾರಿ ಜಿಲ್ಲೆಗಳ ಅಭಿವೃದ್ಧಿಗೆ ತಲಾ 2500 ಕೋಟಿಯಂತೆ 5000 ಕೋಟಿ ರೂ. ಬಿಡುಗಡೆ ಮಾಡಿ ಅಂತ ಒತ್ತಾಯ ಮಾಡಿದ್ದಾರೆ. ಬಹುಶಃ ಕಾಂಗ್ರೆಸ್ ಹಿರಿಯ ನಾಯಕರಿಗೆ ಮಾಹಿತಿ ಕೊರತೆ ಇದೆ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಾಗಿ ಕೆಎಂಇಆರ್ಸಿ ಯಿಂದ 13 ಸಾವಿರ ಕೋಟಿ ರೂ. ಹಣ ಬರೋದಿದೆ. ಎರಡೂ ಜಿಲ್ಲೆಗಳು ಅಭಿವೃದ್ಧಿ ಪಥದಲ್ಲಿ ಸಾಗುತ್ತವೆ ಎಂದು ಕಾಂಗ್ರೆಸ್ ನಾಯಕರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.