ಬಳ್ಳಾರಿ : ಕೊರೊನಾ ಸರಪಳಿ ತುಂಡರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಇನ್ನೂ ಕೆಲದಿನಗಳ ಕಾಲ ಲಾಕ್‍ಡೌನ್ ವಿಸ್ತರಣೆ ಮಾಡಿದರೇ ಒಳ್ಳೆಯದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಲಾಕ್‍ಡೌನ್ ವಿಸ್ತರಣೆ ಮಾಡಿ ಅಂತ ಕೇಳಿಕೊಳ್ಳುತ್ತಿದ್ದಾರೆ. ನನ್ನ ಅಭಿಪ್ರಾಯವೂ ಅದೇ ಆಗಿದೆ ಎಂದು ಬಳ್ಳಾರಿ ನಗರದಲ್ಲಿಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಐದು ದಿನಗಳ ಕಾಲ ಸಂಪೂರ್ಣ ಲಾಕ್‍ಡೌನ್ ಮಾಡಿರುವುದರಿಂದ ಸೊಂಕಿನ ಪ್ರಮಾಣ ಇಳಿಕೆಯಾಗುತ್ತಿದೆ.
ಜನರು ಆಮ್ಲಜನಕದ ಪ್ರಮಾಣ(ಸ್ಯಾಚುರೇಶನ್) ಕಡಿಮೆಯಾದ ನಂತರ ಭಯಗೊಂಡು ಆಸ್ಪತ್ರೆಗೆ ಬರುತ್ತಿದ್ದಾರೆ. ಅಲ್ಲಿವರೆಗೆ ಇದರ ಕುರಿತು ನಿರ್ಲಕ್ಷ್ಯವಹಿಸುತ್ತಿದ್ದಿದ್ದೇ ಈ ಎಲ್ಲ ಸಮಸ್ಯೆಗಳಿಗೆ ಕಾರಣ ಎಂದ್ರು.
ಜನರು ರೋಗದ ಗುಣಲಕ್ಷಣ ಕಂಡು ಬಂದರೇ ತಕ್ಷಣ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆಗೆ ಒಳಪಡಬೇಕು. ಇದರ ಜತೆಗೆ ಮೂರನೇ ಅಲೆ ಬಂದರೂ ಎದುರಿಸಲು ಜಿಲ್ಲಾಡಳಿತ ಸಿದ್ಧವಾಗುತ್ತಿದೆ ಎಂದು ಸಚಿವ ಆನಂದಸಿಂಗ್ ತಿಳಿಸಿದ್ದಾರೆ.