ಹೊಸಪೇಟೆ : ನಗರದ ರೋಟರಿ ವೃತ್ತದಲ್ಲಿನ 150 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಸಚಿವ ಆನಂದ ಸಿಂಗ್ ಅವರು ಧ್ವಜಾರೋಹಣ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ವೃತ್ತದಲ್ಲಿ 2ನೇ ಬಾರಿಗೆ ಧ್ವಜಾರೋಹಣ ನೆರವೇರಿಸಲಾಗುತ್ತಿದೆ. ಹಿಂದೆ ಇದೇ ವೇದಿಕೆಯಲ್ಲಿ ಪಂಪಾವಿರೂಪಾಕ್ಷೇಶ್ವರ ದೇವರು ಹಾಗೂ ಪಶ್ಚಿಮ ತಾಲೂಕು ಜನರ ಆಸೆಯನ್ನು ಈಡೇರಿಸುತ್ತಾನೆ ಎಂದು ಹೇಳಿದ್ದೆ. ಅದು ಇಂದು ಈಡೇರಿದೆ. ಇನ್ನು, ಕೆಲ ದಿನಗಳಲ್ಲಿ ಅಧಿಕೃತವಾಗಿ ನೂತನ ಜಿಲ್ಲೆ ಘೋಷಣೆಯಾಗಲಿದೆ ಎಂದರು.
ಆದಷ್ಟು ಬೇಗ ನೂತನ ಜಿಲ್ಲೆಯ ಘೋಷಣೆಯಾಗಲಿದೆ. ಈ ಕುರಿತು ನಂಬಿಕೆ, ವಿಶ್ವಾಸವಿದೆ. ವಿಜಯನಗರ ಜಿಲ್ಲೆ ವಿಜಯೋತ್ಸವನ್ನು ರಾಜ್ಯ ಸೇರಿದಂತೆ ದೇಶದ ಇತರ ರಾಜ್ಯಗಳು ತಿರುಗಿ ನೋಡುವ ರೀತಿ ಆಚರಿಸಲಾಗುವುದು. ಈಗಾಗಲೇ ಸಿದ್ಧತೆ ನಡೆಯುತ್ತಿವೆ.
ವಿಜಯೋತ್ಸವದಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಅತಿಥಿಗಳಾಗಿ ಆಗಮಿಸಲಿದ್ದಾರೆ. ರಾಷ್ಟ್ರ ನಾಯಕರಿಗೂ ಸಹ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗುವುದು ಎಂದರು.
ರಾಷ್ಟ್ರ ರಾಜಧಾನಿಯಲ್ಲಿ ಆಚರಿಸುವ ಗಣರಾಜ್ಯೋತ್ಸವದಲ್ಲಿ ಹಂಪಿಯ ಉಗ್ರನರಸಿಂಹ, ಕೃಷ್ಣದೇವರಾಯ ಪಟ್ಟಾಬಿಷೇಕ ಸ್ತಬ್ಧಚಿತ್ರಗಳು ಪ್ರದರ್ಶನವಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಇಲಾಖೆಯಲ್ಲಿ ಏನಾದ್ರೂ ಸಮಸ್ಯೆಗಳಿದ್ರೆ ಗಮನಕ್ಕೆ ತನ್ನಿ : ಇಲಾಖೆಯಲ್ಲಿ ಏನಾದ್ರೂ ಸಮಸ್ಯೆಗಳು ಇದ್ರೇ ಗಮನಕ್ಕೆ ತನ್ನಿ ಎಂದು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಾಪಾಟಿ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಅಲ್ಲದೇ ಜನರಿಗೆ 100 ರಷ್ಟು ಸೇವೆಯನ್ನು ನೀಡಬೇಕೆಂದು ತಿಳಿಸಿದರು.
ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ಸಿಪಿಐ ನಾಗರಾಜ್ ಅವರು ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ಎಲ್ಲರೂ ಒಳ್ಳೆಯ ಕೆಲಸ ಮಾಡೋಣ. ಜಿಲ್ಲಾ ಪೊಲೀಸ್ ತಂಡಕ್ಕೆ ಮಾದರಿಯಾಗಿ ಕೆಲಸ ಮಾಡೋಣ ಎಂದರು.
ಇನ್ನು, ಸಾರ್ವಜನಿಕರ ಸಂಪರ್ಕ ಮತ್ತು ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕೆ.ರಾಮಲಿಂಗಪ್ಪ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ವಿವಿಧ ಪತ್ರಿಕೆಯ ವರದಿಗಾರರು ಮತ್ತು ವಾರ್ತಾ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.