ಬಳ್ಳಾರಿ: ಕೋವಿಡ್ ಸೋಂಕು ಹರಡುವಿಕೆ ಭಯದ ಹಿನ್ನೆಲೆ ರಾಜ್ಯವ್ಯಾಪಿ ಶಾಲಾ - ಕಾಲೇಜುಗಳು ರಜೆ ನೀಡಿದ್ದರಿಂದ ಬಹುತೇಕ ವಿದ್ಯಾರ್ಥಿಗಳು ಇಡೀ ದಿನವೂ ಮೊಬೈಲ್ನಲ್ಲಿ ತಲ್ಲೀನರಾಗಿ ಪೋಷಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆದರೆ, ಇಲ್ಲೊಬ್ಬ ಪುಟ್ಟ ಬಾಲಕಿ ಮನೆಯ ಬಾಗಿಲು ಮುಂಭಾಗದಲ್ಲಿ ಹಾಕುವ ಮ್ಯಾಟ್ ತಯಾರಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಎಲ್ಲರ ಪ್ರೀತಿಗೆ ಪಾತ್ರವಾಗಿದ್ದಾಳೆ.
ತಾಲೂಕಿನ ಕಕ್ಕಬೇವಿನಹಳ್ಳಿಯ ನಿವಾಸಿಗಳಾದ ಹೆಚ್.ವೀರಶೇಖರಗೌಡ ಹಾಗೂ ರತ್ನಮ್ಮ (ವಿದ್ಯಾ) ದಂಪತಿಗೆ ಜನಿಸಿದ ದ್ವಿತೀಯ ಪುತ್ರಿ ಹೆಚ್. ಚೈತ್ರಾ (10) ಎಂಬಾಕೆ ಈ ಮ್ಯಾಟ್ ತಯಾರಿಕೆಯಲ್ಲಿ ತೊಡಗಿರುವ ವಿದ್ಯಾರ್ಥಿನಿಯಾಗಿದ್ದಾಳೆ. ಕಕ್ಕಬೇವಿನಹಳ್ಳಿ ಗ್ರಾಮದಲ್ಲಿರುವ ನಂದಿಶ್ರೀ ವಿದ್ಯಾನಿಕೇತನ ಶಾಲೆಯಲ್ಲಿ ನಾಲ್ಕನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಈ ವಿದ್ಯಾರ್ಥಿನಿ ಹೆಚ್.ಚೈತ್ರಾ ಅವರು, ಕಳೆದ ಎರಡು ವರ್ಷಗಳಿಂದಲೂ ಈ ಮ್ಯಾಟ್ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾಳೆ.
ಈವರೆಗೂ ಎರಡು - ಮೂರು ಮ್ಯಾಟ್ಗಳನ್ನು ತಯಾರಿಸಿ ತಮ್ಮ ಮನೆಯೊಳಗಿದ್ದ ಹಳೆಯ ಸೀರೆಗಳನ್ನ ತುಂಡರಿಸಿ ದಾರದ ಹುಂಡಿ ಕಟ್ಟಿಕೊಂಡು ದಿನಾಲೂ ಎರಡು ಗಂಟೆಗಳ ಕಾಲ ಮ್ಯಾಟ್ ತಯಾರಿಕೆ ಮಾಡುತ್ತಿದ್ದಾಳೆ.
ಪ್ರೇರಣೆಯಾದ ಅಕ್ಕ: ನನ್ನ ಮ್ಯಾಟ್ ತಯಾರಿಕೆಗೆ ಪ್ರೇರಣೆಯಾಗಿದ್ದು ನನ್ನ ಅಕ್ಕ ಗೌರಿ. ಆಕೆ ಆಗಾಗ ಮ್ಯಾಟ್ ತಯಾರಿಕೆ ಮಾಡುತ್ತಿದ್ದಳು. ಅದನ್ನ ನೋಡ ನೋಡುತ್ತಲೇ ನಾನು ಕಲಿತಿರುವೆ ಎನ್ನುತ್ತಾಳೆ ಪುಟ್ಟ ಬಾಲಕಿ ಚೈತ್ರಾ.
ಚಿಕ್ಕ ವಯಸ್ಸಿನಲ್ಲೇ ಮನೆಯ ಜವಾಬ್ದಾರಿ: ಕೊರೊನಾ ಹಿನ್ನೆಲೆ ಶಾಲಾ - ಕಾಲೇಜುಗಳಿಗೆ ರಜೆ ಇರುವುದರಿಂದಲೇ ಬರೀ ಮೊಬೈಲ್ನಲ್ಲಿ ಕಾಲಹರಣ ಮಾಡೋ ಮಕ್ಕಳೇ ಹೆಚ್ಚಾಗಿ ಕಾಣ ಸಿಗುತ್ತಾರೆ. ಅಂತಹುದರಲ್ಲಿ ಮನೆಯ ಸೌಂದರ್ಯ ಹೆಚ್ಚಿಸುವ ಈ ಮ್ಯಾಟ್ ತಯಾರಿಕೆಯಲ್ಲಿ ತೊಡಗಿಕೊಂಡಿರುವ ಈಕೆ ತನ್ನ ಚಿಕ್ಕ ವಯಸ್ಸಿನಲ್ಲೇ ಮನೆಯ ಜವಾಬ್ದಾರಿಯನ್ನ ಹೊತ್ತಿರೋದು ವಿಶೇಷವೇ ಸರಿ.