ಬಳ್ಳಾರಿ: ಜಿಲ್ಲೆಯ ಹರಪನಹಳ್ಳಿ ಪಟ್ಟಣದ ಸಮತಾ ರೆಸಾರ್ಟ್ ಇಂದು ಅಪರೂಪದ ಮಂತ್ರ ಮಾಂಗಲ್ಯ ಮದುವೆಗೆ ಸಾಕ್ಷಿಯಾಯಿತು. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಕಂಪನಿಯ ಉದ್ಯೋಗಿ ತುಳಸಿ ರಾಮ್ ಹಾಗೂ ಕುಮಾರ ಕೆಫೆ ಮಾಲೀಕ ಸತೀಶಕುಮಾರ ಅವರ ಹಿರಿಯ ಮಗಳು ದಿವ್ಯಭಾರತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ರಾಷ್ಟ್ರಕವಿ ಕುವೆಂಪು ಅವರು ತಮ್ಮ ಮಗನಾದ ಪೂರ್ಣಚಂದ್ರ ತೇಜಸ್ವಿಯವರ ಮದುವೆ ಸಮಾರಂಭವನ್ನ ಮಂತ್ರ ಮಾಂಗಲ್ಯ ಮುಖೇನ ಮಾಡಿಸಿದ್ದರು. ಅದೇ ಶೈಲಿಯಲ್ಲೇ ಈ ಮದುವೆ ಸಮಾರಂಭ ಸಹ ನಡೆಯಿತು.
ಮಂತ್ರ ಮಾಂಗಲ್ಯದ ವಿಶೇಷತೆ : ರಾಷ್ಟ್ರಕವಿ ಕುವೆಂಪು ಅವರ ಮಂತ್ರ ಮಾಂಗಲ್ಯದ ವಿಶೇಷತೆ ಏನೆಂದರೆ, ಪುರೋಹಿತರು, ವೇದ- ಘೋಷ ಹಾಗೂ ಧಾರ್ಮಿಕ ಸಂಪ್ರದಾಯ ಸೇರಿದಂತೆ ಇತರೆ ಆಚರಣೆಗಳ ಗೊಡವೆಗೂ ಹೋಗದೇ, ಕುವೆಂಪು ರಚಿಸಿದ ‘ವಿವಾಹ ಸಂಹಿತೆ’ ಓದುವ ಮೂಲಕ ಪರಸ್ಪರ ಹೂವಿನ ಹಾರ ಬದಲಾಯಿಸಿಕೊಂಡು ಅತ್ಯಂತ ಸರಳವಾಗಿ ಮದುವೆಯಾಗುವುದು.
ಇಂತಹ ಅಪರೂಪದ ಮದುವೆಗೆ ಆಗಮಿಸಿದವರೆಲ್ಲರಿಗೂ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯುಳ್ಳ ಕಿರು ಪುಸ್ತಕ ವಿತರಿಸಲಾಯಿತು.