ಬಳ್ಳಾರಿ: ಆಂಧ್ರ ಪ್ರದೇಶದ ದೇವರುಗಟ್ಟು ಗ್ರಾಮ ಕರ್ನಾಟಕದ ಬಳ್ಳಾರಿ ಜಿಲ್ಲೆ ಸಮೀಪದಲ್ಲಿದೆ. ದೇವರಗಟ್ಟು ಗ್ರಾಮದಲ್ಲಿ ಪ್ರತಿ ವರ್ಷ ಮಾಳ ಮಲ್ಲೇಶ್ವರ ಜಾತ್ರೆ ನಡೆಯುತ್ತದೆ. ಇದೊಂದು ಭಯಾನಕ ಬಡಿಗೆ ಬಡಿದಾಟದ ಜಾತ್ರೆಯಾಗಿದೆ. ಈ ಜಾತ್ರೆಯ ಆಚರಣೆ ಮತ್ತು ಹಿನ್ನೆಲೆ ಸಹ ಜನ ಹುಬ್ಬೇರಿಸುವಂತಿದೆ. ಅಂದ ಹಾಗೆ ಈ ಜಾತ್ರೆಯಲ್ಲಿ ಕರ್ನಾಟಕದ ಭಕ್ತರೇ ಹೆಚ್ಚು ಸಂಖ್ಯೆಯಲ್ಲಿ ಭಾಗಿಯಾಗುತ್ತಾರೆ.
ದೇವರಗಟ್ಟು ಗ್ರಾಮದಲ್ಲಿ ಪ್ರತಿ ವರ್ಷ ಮಾಳ ಮಲ್ಲೇಶ್ವರ ಜಾತ್ರೆ ನಡೆಯುತ್ತದೆ. ಇದೊಂದು ಭಯಾನಕ ಬಡಿಗೆ ಬಡಿದಾಟದ ಜಾತ್ರೆಯಾಗಿದೆ. ಈ ಜಾತ್ರೆಯ ಆಚರಣೆ ಮತ್ತು ಹಿನ್ನೆಲೆಯು ಸಹ ಹುಬ್ಬೇರಿಸುವಂತಿದೆ. ಅಂದಹಾಗೆ ಈ ಜಾತ್ರೆಯಲ್ಲಿ ಕರ್ನಾಟಕದ ಭಕ್ತರೇ ಹೆಚ್ಚು ಸಂಖ್ಯೆಯಲ್ಲಿ ಭಾಗಿಯಾಗುತ್ತಾರೆ. ಸುಮಾರು 20 ಸಾವಿರಕ್ಕೂ ಹೆಚ್ಚು ಜನ ಪ್ರತಿ ವರ್ಷದ ಜಾತ್ರೆ ಸಮಯದಲ್ಲಿ ಪಾಲ್ಗೊಳ್ಳುತ್ತಾರೆ.
ಬಡಿದಾಟದ ಜಾತ್ರೆ: ಜಾತ್ರೆಗೆ ಬಂದ ಭಕ್ತರು ಮಧ್ಯರಾತ್ರಿ 1 ಗಂಟೆಯಿಂದ ಬೆಳಗ್ಗೆ 5ರ ವರಗೆ ಬಡಿಗೆ ಹಿಡಿದು ಬಡಿದಾಡಿಕೊಳ್ಳುತ್ತಾರೆ. ಇದು ಎರಡು ಗ್ರಾಮಗಳ ನಡುವೆ ನಡೆಯುವ ಸಾಂಪ್ರದಾಯಿಕ ಬಡಿಗೆ ಬಡಿದಾಟವಾಗಿದೆ. ಸಂಪ್ರದಾಯದಂತೆ ಈ ವರ್ಷವೂ ಕೈಯಲ್ಲಿ ಬಡಿಗೆಗಳನ್ನು ಹಿಡಿದು ಜನ ಒಬ್ಬರಿಗೊಬ್ಬರು ಬಡಿದಾಡಿಕೊಂಡಿದ್ದಾರೆ.
ವಿಜಯದಶಮಿ ದಿನ ಮಧ್ಯರಾತ್ರಿ ನಡೆಯುವ ಹೊಡೆದಾಟ: ವಿಜಯದ ಸಂಕೇತವಾಗಿರುವ ವಿಜಯದಶಮಿ ದಿನದಂದು ಮಧ್ಯರಾತ್ರಿ ನಡೆಯುವ ಬಡಿಗೆಗಳ ಕಾದಾಟ ದೇವರನ್ನು ತಮ್ಮೂರಿಗೆ ಕರೆದುಕೊಳ್ಳಲು ನಡೆಯುತ್ತದೆ. ದೇವರನ್ನು ಒಲಿಸಿಕೊಳ್ಳಲು ಭಕ್ತರು ಏನೆಲ್ಲ ಮಾರ್ಗಗಳನ್ನು ಅನುಸರಿಸುತ್ತಾರೆ ಎನ್ನುವುದಕ್ಕೆ ಇದು ಉತ್ತಮ ನಿದರ್ಶನವಾಗಿದೆ. ಗಡಿಭಾಗ ಬಳ್ಳಾರಿ ಸಮೀಪದ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ನೇರಣಕಿ ಗ್ರಾಮಕ್ಕೆ ಸೇರಿದ ಅರಣ್ಯ ಪ್ರದೇಶದ ಗುಡ್ಡದ ಮೇಲೆ ಮಾಳ ಮಲ್ಲೇಶ್ವರಸ್ವಾಮಿ ದೇವಸ್ಥಾನವಿದೆ.
ಕನ್ನಡದಲ್ಲೇ ಕಾರಣಿಕ: ಇದಕ್ಕೆ ದೇವರಗುಡ್ಡ ಎಂದು ಕರೆಯಲಾಗುತ್ತದೆ. ಕರ್ನಾಟಕದ ಗಡಿ ಭಾಗಕ್ಕೆ ಹೊಂದಿಕೊಂಡಿದ್ದು, ಇಲ್ಲಿನ ಬಹುತೇಕ ಜನ ಕನ್ನಡ ಭಾಷಿಕರೇ ಆಗಿದ್ದರಿಂದ ಕಾರಣಿಕ ನುಡಿ ಸಹ ಕನ್ನಡ ಭಾಷೆಯಲ್ಲೇ ಆಗುವುದು ವಿಶೇಷ. ಈ ದೃಶ್ಯವನ್ನು ನೋಡಲು ನೂರಾರು ಭಕ್ತರು ಆಗಮಿಸುತ್ತಾರೆ. ಇನ್ನು, ಪ್ರಮುಖ ವಿಚಾರವೆಂದರೆ ಬಡಿಗೆ ಬಡಿದಾಟಕ್ಕೆ ವಿದ್ಯಾವಂತರು ಸೇರಿದಂತೆ ಎಲ್ಲಾ ವಯಸ್ಸು ಹಾಗೂ ವರ್ಗದ ಜನ ಭಾಗವಹಿಸುವುದು ಮತ್ತೊಂದು ವಿಶೇಷ.
ಇದನ್ನೂ ಓದಿ: ಬೆಳಗಾವಿ ನಗರದ 'ತವರು ಮನೆಯ ದೇವತೆ' ಜಾತ್ರೆಗೆ ಅದ್ಧೂರಿ ಚಾಲನೆ
ರಾತ್ರಿ ನಡೆಯುವ ಮಾಳಮ್ಮ ಮತ್ತು ಮಲ್ಲೇಶ್ವರ ಸ್ವಾಮಿಯ ಕಲ್ಯಾಣೋತ್ಸವದಲ್ಲಿ ಉತ್ಸವ ಮೂರ್ತಿ ಹಾಗೂ ಪಲ್ಲಕ್ಕಿಯನ್ನು ಹೊತ್ತು ನೇರಣಕಿ ಗ್ರಾಮದ ಭಕ್ತರು ದೇವರ ಗುಡ್ಡಕ್ಕೆ ಬರುತ್ತಾರೆ. ಈ ವೇಳೆ ಕಬ್ಬಿಣದ ಸಲಾಕೆ, ಸುತ್ತಿದ ಕೋಲು ಹಿಡಿದು ತಂಡ ತಂಡಗಳಾಗಿ ತಮಟೆ ಬಾರಿಸುತ್ತ, ಹಿಲಾಲು ಉರಿಸುತ್ತ, ಹೂಂಕರಿಸುತ್ತ, ಕುಣಿಯುತ್ತ, ಉತ್ಸವ ಮೂರ್ತಿಗಳನ್ನು ಕೊಂಡೊಯ್ಯುತ್ತಾರೆ.
ಪೊಲೀಸ್ ಪ್ರಕರಣ ದಾಖಲಾಗುವುದಿಲ್ಲ: ಈ ಉತ್ಸವ ಮೂರ್ತಿಯಿಂದ ತಮ್ಮ ಗ್ರಾಮಕ್ಕೆ ಒಳ್ಳೆಯದಾಗುತ್ತದೆಂಬ ನಂಬಿಕೆಯಿಂದ ಈ ರೀತಿ ಕೊಂಡೊಯ್ಯುಲಾಗುತ್ತದೆ. ಇದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿ. ಈ ಸಂಭ್ರಮದಲ್ಲಿ ಸಾವಿರಾರು ಜನರ ಮಧ್ಯೆ ಹೊಡೆದಾಡುವ ದೃಶ್ಯ ನಡೆಯುವುದರಿಂದ ಇಲ್ಲಿ ಏನೇ ಅನಾಹುತ ಸಂಭವಿಸಿದರೂ ಯಾರು ಹೊಣೆಗಾರರಲ್ಲ. ಇವು ಪೊಲೀಸ್ ಪ್ರಕರಣಕ್ಕೂ ಸಂಬಂಧಪಡುವುದಿಲ್ಲ.
80ಕ್ಕೂ ಹೆಚ್ಚು ಜನರಿಗೆ ಗಾಯ: ಪ್ರತಿ ವರ್ಷದಂತೆ ಈ ವರ್ಷವೂ ದಸರಾ ಹಬ್ಬದ ರಾತ್ರಿ ನಡೆದ ಕಲ್ಯಾಣೋತ್ಸವದಲ್ಲಿ ಮೂರ್ತಿಗಳ ರಕ್ಷಣೆಯಲ್ಲಿ ನೇರಣಕಿ ಭಕ್ತ ಸಮೂಹ ಮತ್ತು ಅರಕೆರ, ಎಳ್ಳಾರ್ಥಿ, ವಿರುಪಾಪುರ, ಸುಳುವಾಯಿ ಮೊದಲಾದ ಸುತ್ತಮುತ್ತಲ ಗ್ರಾಮಗಳ ಜನತೆ ಉತ್ಸವ ಮೂರ್ತಿಗಳನ್ನು ತಮ್ಮ ಗ್ರಾಮಕ್ಕೆ ತೆಗೆದುಕೊಂಡು ಹೋಗಬೇಕು ಎಂಬ ಪ್ರಯತ್ನದಿಂದ ಒಬ್ಬರಿಗೊಬ್ಬರು ಬಡಿಗೆ ಮೂಲಕ ಕಾದಾಡಿದ್ದಾರೆ. ಈ ವರ್ಷ ಬಡಿಗೆ ಬಡಿದಾಟದಿಂದಾಗಿ 80ಕ್ಕೂ ಹೆಚ್ಚು ಜನರು ಗಾಯಗೊಂಡರೆ, ಕೆಲವರ ಪರಿಸ್ಥಿತಿ ಗಂಭೀರವಾಗಿದೆ. ಕೂಡಲೇ ಚಿಕಿತ್ಸೆ ನೀಡಲು ಸ್ಥಳದಲ್ಲಿಯೇ ಜಿಲ್ಲಾಡಳಿತ ವ್ಯವಸ್ಥೆ ಮಾಡಿತ್ತು. ತುರ್ತು ಚಿಕಿತ್ಸಾ ಘಟಕಗಳು, ಹಲವಾರು ಆಂಬುಲೆನ್ಸ್ಗಳನ್ನು ಸಿದ್ಧ ಮಾಡಿದ್ದರು.
ಬಡಿಗೆ ಜಾತ್ರೆಯಲ್ಲಿ ನೆತ್ತರು ಇಲ್ಲಿ ಭೂಮಿ ಅರ್ಪಣೆಯಾದರೆ ಒಳಿತು ರಾಕ್ಷಸನ ಸಂಹಾರ ಈ ರೀತಿಯಾಗುತ್ತೆ ಎಂಬ ಐತಿಹ್ಯವೂ ಇದೆ. ವಿಜಯದಶಮಿ ಹಬ್ಬದ ದಿನದ ಸಂಭ್ರಮದಿಂದ ಹಬ್ಬ ಆಚರಿಸಿ ನೆರೆಯ ಆಂಧ್ರ ಹಾಗೂ ನಮ್ಮ ರಾಜ್ಯದ ಗಡಿಭಾಗದ ಈ ಪುಣ್ಯಕ್ಷೇತ್ರದಲ್ಲಿ ನಡೆಯುವ ಬಡಿಗೆ ಬಡಿದಾಟ ಭಯಾನಕವಾಗಿತ್ತು. ಇದೇ ವೇಳೆ ಉತ್ಸವ ನೋಡಲು ತೆರಳುತ್ತಿದ್ದ ವೇಳೆ ಸಿರಗುಪ್ಪದ ಯುವಕ ರವೀಂದ್ರ ನಾಥ್ ರೆಡ್ಡಿ ಎಂಬುವವರು ಸಾವನ್ನಪ್ಪಿದ್ದು, ಹೃದಯಾಘಾತದಿಂದ ಈ ಸಾವು ಸಂಭವಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.