ಬಳ್ಳಾರಿ: ಬಳ್ಳಾರಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆಯಲು ವಿವಿಧೆಡೆಯಿಂದ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಕಾಲೇಜಿನಲ್ಲಿ ಪ್ರವೇಶ ಬಯಸಿ ಜಿಲ್ಲೆಯ ವಿವಿಧ ತಾಲೂಕಿನ ವಿದ್ಯಾರ್ಥಿಗಳು ಆಗಮಿಸುತ್ತಿರುವುದು ಕಾಲೇಜಿನ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.
ಹೌದು, ಬಳ್ಳಾರಿ ನಗರದ ಮಧ್ಯಭಾಗದಲ್ಲಿರುವ ಸರ್ಕಾರಿ ಪದವಿಪೂರ್ವ (ಮುನ್ಸಿಪಲ್) ಕಾಲೇಜು ಪ್ರವೇಶಕ್ಕೆ ಈ ಬಾರಿ ಬೇಡಿಕೆ ಹೆಚ್ಚಿದೆ. ಈಗಾಗಲೇ ಪ್ರವೇಶಾತಿ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು ಕಲಾ, ವಿಜ್ಞಾನ ಹಾಗೂ ಶಿಕ್ಷಣ ವಿಭಾಗದಲ್ಲಿ ಪ್ರವೇಶ ಪಡೆಯಲು ನಿತ್ಯ ನೂರಾರು ವಿದ್ಯಾರ್ಥಿಗಳು ಬಂದು ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಗುಣಮಟ್ಟದ ಬೋಧನೆಗೆ ಹೆಸರಾಗಿರುವ ಕಾಲೇಜಿನಲ್ಲಿ ತರಗತಿ ಕೋಣೆಗಳಿಗೆ ಯಾವುದೇ ಕೊರತೆ ಇಲ್ಲ. ಎಜುಕೇಷನ್ ಬ್ಲಾಕ್‌ನಲ್ಲಿ ಹೆಚ್ಚುವರಿ ಮೂರ್ನಾಲ್ಕು ಕೋಣೆಗಳಿವೆ. ಹೆಚ್ಚಿನ ತರಗತಿ ಕೋಣೆಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಎನ್‌ಎಸ್‌ಎಸ್, ಮಹಿಳೆಯರ ವಿಶ್ರಾಂತಿ ಕೋಣೆ, ಸ್ಕೌಟ್ಸ್ ಆ್ಯಂಡ್ ಗೈಡ್ಸ್ಗೂ ಪ್ರತ್ಯೇಕ ರೂಂನ ವ್ಯವಸ್ಥೆಯಾಗಲಿದೆ. ಗ್ರಂಥಾಲಯದ ಜಾಗವನ್ನು ಸಹ ವಿಸ್ತರಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಅಲ್ಲಿಯೇ ಕುಳಿತು ಓದಿಕೊಳ್ಳಲು ಅನುಕೂಲಕರ ವಾತಾವರಣ ಇದೆ.
ಇದನ್ನೂ ಓದಿ: ಅಕ್ರಮ ವಲಸಿಗರಿಗೆ ಆಧಾರ್ ಕಾರ್ಡ್ ಪೂರೈಸುತ್ತಿದ್ದ ಜಾಲ ಭೇದಿಸಿದ ಪೊಲೀಸ್.. ಗೃಹ ಸಚಿವರಿಂದ ಪ್ರಶಂಸೆ
ಕಾಲೇಜಿನಲ್ಲಿ ಒಟ್ಟು 34 ಸಿಬ್ಬಂದಿ ಇದ್ದು, ಈ ಪೈಕಿ ಓರ್ವ ಪ್ರಾಂಶುಪಾಲರು ಸೇರಿದಂತೆ 28 ಬೋಧಕರು ಹಾಗೂ 5 ಜನ ಡಿ ಗ್ರೂಪ್ ನೌಕರರು ಇದ್ದಾರೆ. ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈಗಾಗಲೇ ನೂರಾರು ವಿದ್ಯಾರ್ಥಿಗಳು ಪ್ರವೇಶಕ್ಕಾಗಿ ಕಾಲೇಜಿಗೆ ಬರುತ್ತಿದ್ದು, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಯಾವುದೇ ಸಮಸ್ಯೆ ಆಗದಂತೆ ಇಡೀ ಕಾಲೇಜಿನ ಬೋಧಕ ಸಿಬ್ಬಂದಿ ತಂಡ ಶ್ರಮಿಸಲಿದೆ ಎಂದು ಕಾಲೇಜಿನ ಹಿರಿಯ ಉಪನ್ಯಾಸಕ ಚಂದ್ರಹಾಸ ತಿಳಿಸಿದ್ದಾರೆ.