ಬಳ್ಳಾರಿ: ಸಾಲಕ್ಕೆ ಹೆದರಿ ಲಾರಿ ಮಾಲೀಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. ತುಂಬರಗುದ್ದಿ ಗ್ರಾಮದ ಕರಿಯಪ್ಪ (45) ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಲಾರಿ ಮಾಲೀಕ.
ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಅಂಕಮನಾಳದ ಹೊರ ವಲಯದ ಬಳಿ ಘಟನೆ ನಡೆದಿದೆ. ಲಾರಿ ಖರೀದಿಸುವಾಗ ಸಾಲದ ರೂಪದಲ್ಲಿ ಖರೀದಿ ಮಾಡಿದ್ದರು. ತಿಂಗಳ ಕಂತು ಭರಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕರಿಯಪ್ಪ ಒಟ್ಟು ಎರಡು ಲಾರಿಗಳನ್ನು ಖರೀದಿಸಿದ್ದರು. ಲಾರಿ ಬಾಡಿಗೆ ಸಿಗದ ಹಿನ್ನೆಲೆ ತಿಂಗಳಾಂತ್ಯದ ಲಾರಿ ಸಾಲದ ಕಂತು ಪಾವತಿಗೆ ಒದ್ದಾಟ ನಡೆಸಿದ್ದರು ಎಂಬುದಾಗಿ ತಿಳಿದುಬಂದಿದೆ.
ಕೆಲವು ತಿಂಗಳುಗಳ ಸಾಲದ ಕಂತು ಬಾಕಿ ಇತ್ತು. ಅದನ್ನು ಆದಷ್ಟು ಬೇಗ ತುಂಬುವಂತೆ ಬ್ಯಾಂಕ್‍ನಿಂದ ನಿರಂತರ ಒತ್ತಡ ಇತ್ತು ಎನ್ನಲಾಗಿದೆ. ಸದರಿ ವಿಚಾರ ಸ್ನೇಹಿತರು, ಸಂಬಂಧಿಕರಿಗೆ ತಿಳಿದರೆ ತನ್ನ ಮರ್ಯಾದೆ ಹೋಗುತ್ತದೆ ಎಂದು ಸಾಲಕ್ಕೆ ಹೆದರಿ, ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚೋರನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಓದಿ: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಪ್ರಕರಣ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ