ವಿಜಯನಗರ/ಬೆಂಗಳೂರು: ವಿಜಯನಗರ ಜಿಲ್ಲೆಯಲ್ಲಿ ಪಹಣಿ ತಿದ್ದುಪಡಿಗಾಗಿ ಲಂಚ ಪಡೆಯುತ್ತಿದ್ದ ಎಫ್‌ಡಿಒ ಅಧಿಕಾರಿ ಮತ್ತು ಬೆಂಗಳೂರಿನಲ್ಲಿ ಗುತ್ತಿಗೆದಾರನಿಂದ ಲಂಚ ಸ್ವೀಕರಿಸುತ್ತಿದ್ದ ಬೆಸ್ಕಾಂ ಅಸಿಸ್ಟೆಂಟ್ ಇಂಜಿನಿಯರ್ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ವಿಜಯನಗರ ಜಿಲ್ಲೆಯಲ್ಲಿ ಲೋಕಾಯುಕ್ತರ ದಾಳಿ: ಮಂಗಳವಾರ ಸಂಜೆ ಹೂವಿನಹಡಗಲಿ ತಹಶೀಲ್ದಾರ್ ಕಚೇರಿಗೆ ಲೋಕಾಯುಕ್ತರು ದಾಳಿ ನಡೆಸಿರುವುದು ಬೆಳಕಿಗೆ ಬಂದಿದೆ. ತಾಲ್ಲೂಕು ಕಚೇರಿಯ ಡಿಸಿಬಿ ವಿಭಾಗದ ಪ್ರಥಮ ದರ್ಜೆ ಸಹಾಯಕ ವೆಂಕಟಸ್ವಾಮಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. ಹಿರೇಕೊಳಚಿ ಗ್ರಾಮದ ನಿವೃತ್ತ ಶಿಕ್ಷಕ ಲಕ್ಕಪ್ಪ ಅಂಗಡಿ ವಡ್ಡರ ಅವರಿಂದ ಲಂಚದ ಹಣ ಪಡೆಯುತ್ತಿರುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ ಈ ಅಧಿಕಾರಿ.
ತಾಲ್ಲೂಕಿನ ಹಿರೇಕೊಳಚಿ ಗ್ರಾಮದ ವಡ್ಡರ ಚೌಡಮ್ಮ ಎಂಬುವವರಿಗೆ ಸೇರಿದ ಹಗರನೂರು ಕಂದಾಯ ಗ್ರಾಮದ ಸ.ನಂ. 330/ಎ. ಜಮೀನಿನ ಪಹಣಿ ತಿದ್ದುಪಡಿ ಮಾಡಲು ನ್ಯಾಯಾಲಯ ಆದೇಶಿಸಿತ್ತು. ನ್ಯಾಯಾಲಯ ನಿರ್ದೇಶನದ ಮೇರೆಗೆ ಪಹಣಿ ತಿದ್ದುಪಡಿ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು. ಆದರೂ ಕೆಲದಿನಗಳಿಂದ ಪಹಣಿ ತಿದ್ದುಪಡಿಗೆ ಸತಾಯಿಸಿದ್ದ ವೆಂಕಟಸ್ವಾಮಿ ಈ ಕೆಲಸ ಮಾಡಿಕೊಡಲು 70 ಸಾವಿರ ರೂಪಾಯಿ ಲಂಚ ಕೇಳಿದ್ದರು ಎನ್ನಲಾಗಿತ್ತು.
ಚೌಡಮ್ಮನವರ ಪುತ್ರ ನಿವೃತ್ತ ಶಿಕ್ಷಕ ಲಕ್ಕಪ್ಪ ವಡ್ಡರ್ ಅವರಿಂದ ಪಟ್ಟಣದ ಬಸ್ ನಿಲ್ದಾಣ ಹತ್ತಿರದ ಶ್ರೀದೇವಿ ಹೋಟೆಲ್ನಲ್ಲಿ ಗುಮಾಸ್ತ 65 ಸಾವಿರ ರೂಪಾಯಿ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆ ಲೋಕಾಯುಕ್ತ ಇನ್ಸ್ಪೆಕ್ಟರ್ಗಳಾದ ಸಂಗಮೇಶ, ಸುರೇಶಕುಮಾರ್ ಭಾಗಿಯಾಗಿದ್ದರು.
ಬೆಂಗಳೂರಿನಲ್ಲಿ ಬೆಸ್ಕಾಂ ಅಸಿಸ್ಟೆಂಟ್ ಇಂಜಿನಿಯರ್ ಬಂಧನ: ವಿದ್ಯುತ್ ಸಂಪರ್ಕ ಕಲ್ಪಿಸಲು ಗುತ್ತಿಗೆದಾರನ ಬಳಿ ಲಂಚಕ್ಕೆ ಬೇಡಿಕೆಯಿಟ್ಟು ಮಧ್ಯವರ್ತಿಯ ಮೂಲಕ ಲಂಚದ ಹಣ ಸ್ವೀಕರಿಸುತ್ತಿದ್ದ ಬೆಸ್ಕಾಂ ಅಸಿಸ್ಟೆಂಟ್ ಇಂಜಿನಿಯರ್ ಹಾಗೂ ಮಧ್ಯವರ್ತಿಯನ್ನ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಆಗರ ಬೆಸ್ಕಾಂ ಕಚೇರಿಯ ಅಸಿಸ್ಟೆಂಟ್ ಇಂಜಿನಿಯರ್ ಸಂತೋಷ್ ಹಾಗೂ ಮಧ್ಯವರ್ತಿ ಮಲ್ಲಿಕಾರ್ಜುನ್ ಎಂಬಾತನನ್ನ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.
ಹೆಚ್ಎಸ್ಆರ್ ಲೇಔಟಿನ ಕೆಲ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಪ್ರತಿಯಾಗಿ 2.30 ಲಕ್ಷ ನೀಡುವಂತೆ ಗುತ್ತಿಗೆದಾರ ವೇಣುಗೋಪಾಲ್ ಬಳಿ ಅಸಿಸ್ಟೆಂಟ್ ಇಂಜಿನಿಯರ್ ಸಂತೋಷ್ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಬೇಸತ್ತ ವೇಣುಗೋಪಾಲ್ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಕಾರ್ಯಾಚರಣೆ ಕೈಗೊಂಡ ಲೋಕಾಯುಕ್ತ ಅಧಿಕಾರಿಗಳು ಆಗರದ ಬೆಸ್ಕಾಂ ಕಚೇರಿ ಬಳಿ ಸಂತೋಷ್ ಪರವಾಗಿ 1.50 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಮಧ್ಯವರ್ತಿ ಮಲ್ಲಿಕಾರ್ಜುನ್ ಅನ್ನು ಬಂಧಿಸಿದ್ದಾರೆ. ಬಳಿಕ ಆತನ ಮಾಹಿತಿಯ ಮೇರೆಗೆ ಸಂತೋಷ್ ನನ್ನ ಸಹ ಬಂಧಿಸಲಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ಹೀಗೆ ಎರಡು ಕಡೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಇಬ್ಬರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.