ಬಳ್ಳಾರಿ: ಜಿಲ್ಲಾದ್ಯಂತ ಸಾವಿರಾರು ಲಾರಿಗಳಿದ್ದು, ಕೇವಲ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವ ಲಾರಿಗಳಿಗೆ ಜಿಲ್ಲಾಡಳಿತದಿಂದ ಅವಕಾಶ ನೀಡಲಾಗಿದೆ. ಆದರೂ ಕೂಡಾ ಮೂಲಭೂತ ಸೌಕರ್ಯಗಳ ಅಲಭ್ಯತೆ ಹಿನ್ನೆಲೆಯಲ್ಲಿ ಲಾರಿ ಚಾಲಕರು, ಕ್ಲೀನರ್ಗಳು ಮುಂದೆ ಬರುತ್ತಿಲ್ಲ. ಲಾರಿ ಮಾಲೀಕರ ಪರಿಸ್ಥಿತಿಯೂ ಕೂಡಾ ಶೋಚನೀಯವಾಗಿದೆ.
ಬಳ್ಳಾರಿಯಿಂದ ಹೈದರಾಬಾದ್, ವಿಶಾಖಪಟ್ಟಣಂ, ಚೆನ್ನೈ, ಬೆಂಗಳೂರು, ಪುಣೆ ಸೇರಿದಂತೆ ಇನ್ನಿತರ ಕಡೆಗಳಿಗೆ ಲಾರಿಗಳನ್ನ ಕಳಿಸಿಕೊಡಲಾಗುತ್ತಿತ್ತು. ಲಾಕ್ಡೌನ್ ಘೋಷಣೆಯಾದ ಆಯಾ ಪ್ರದೇಶಗಳಲ್ಲಿ ಇದ್ದ ಲಾರಿಗಳು ಅಲ್ಲಿಯೇ ಸ್ತಬ್ಧವಾಗಿದ್ದು ಅವರ ಪರಿಸ್ಥಿತಿ ಕೂಡಾ ಹೀನಾಯವಾಗಿದೆ ಎಂದು ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ವಿಜಯಭಾಸ್ಕರ್ ರೆಡ್ಡಿ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಟ್ರಾನ್ಸ್ ಪೋರ್ಟ್ ಕಚೇರಿಗಳ ಲಾರಿಗಳಲ್ಲೇ ಬೀಡುಬಿಟ್ಟಿರೋ ಚಾಲಕರು, ಕ್ಲೀನರ್ಗಳಿಗೆ ರೇಷನ್ ಕಿಟ್ಗಳನ್ನು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿತರಿಸಲಾಗಿದೆ.
ವಲಸಿಗರ ಕಾರ್ಮಿಕರ ಸ್ಥಿತಿ ಹೇಗಿದೆ ಗೊತ್ತಾ?
ಗಣಿ ಜಿಲ್ಲೆಯಲ್ಲಿರೋ ವಲಸಿಗ ಕಾರ್ಮಿಕರ ಸ್ಥಿತಿ ಕೂಡಾ ಇದಕ್ಕಿಂತ ಭಿನ್ನವಾಗಿಲ್ಲ. ಹೊರರಾಜ್ಯಗಳಿಂದ ಬಂದಿರುವ ಸುಮಾರು 649 ವಲಸೆ ಕಾರ್ಮಿಕರಿದ್ದು, ಅವರೆಲ್ಲರಿಗೂ ಕೂಡಾ ಜಿಲ್ಲಾಡಳಿತದಿಂದ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಈಗಾಗಲೇ ವಲಸೆ ಕಾರ್ಮಿಕರ ನೆರವಿಗೆ ಕಾಲ್ ಸೆಂಟರ್ಗಳನ್ನು ತೆರೆಯಲಾಗಿದ್ದು, ಸುಮಾರು 9 ವಸತಿ ನಿಲಯಗಳಲ್ಲಿ ಕಾರ್ಮಿಕರಿಗೆ ಊಟ, ಆಶ್ರಯ ಒದಗಿಸಲಾಗಿದೆ.
ಬಳ್ಳಾರಿ ನಗರದಲ್ಲಿ ಎರಡು, ಹಡಗಲಿ, ಹಗರಿಬೊಮ್ಮನಹಳ್ಳಿ, ಹೊಸಪೇಟೆ, ಕೂಡ್ಲಿಗಿ, ಸಿರುಗುಪ್ಪ, ಸಂಡೂರು, ಹರಪನಹಳ್ಳಿಯಲ್ಲಿ ತಲಾ ಒಂದರಂತೆ ನಿರಾಶ್ರಿತರ ಕೇಂದ್ರಗಳನ್ನ ತೆರೆಯಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎನ್.ರಾಜಪ್ಪ ಈಟಿವಿ ಭಾರತ್ಗೆ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ರಾಯಚೂರು, ಬೀದರ್, ಯಾದಗಿರಿ, ಕಲಬುರಗಿ ಜಿಲ್ಲೆಗಳಿಂದ ಬೆಂಗಳೂರಿಗೆ ಗುಳೆ ಹೋಗಿದ್ದ ಅಂದಾಜು 397 ಮಂದಿ ಹಾಗೂ ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ, ಒಡಿಶಾ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಬಿಹಾರ, ಗುಜರಾತ್, ಜಾರ್ಖಂಡ್, ಮಧ್ಯಪ್ರದೇಶ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಿಂದ ಬಂದಂತಹ ಅಂದಾಜು 649 ವಲಸಿಗ ಕಾರ್ಮಿಕರು ನಿರಾಶ್ರಿತರ ಕೇಂದ್ರಗಳಲ್ಲಿದ್ದು, ದಿನಾಲೂ ಉಪಹಾರ, ಊಟದ ವ್ಯವಸ್ಥೆ ಮಾಡಲಾಗಿದೆ.