ಬಳ್ಳಾರಿ: ಜಿಲ್ಲೆಯ ಕುಡುತಿನಿ ಸುತ್ತಮುತ್ತಲಿನ ಸ್ಪಾಂಜ್ ಐರನ್ ಕಾರ್ಖಾನೆಗಳು ಹೊರಸೂಸುವ ಧೂಳಿನಿಂದ ಸಮಸ್ಯೆ ಎದುರಾಗಿದ್ದು, ಶೀಘ್ರ ಧೂಳಿನಿಂದ ಮುಕ್ತಿ ನೀಡುವಂತೆ ಆಗ್ರಹಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.
ಕುಡುತಿನಿ ಗ್ರಾಮದ ಭೂ ಸಂತ್ರಸ್ತರು ಸೇರಿದಂತೆ ರೈತ ಸಂಘದ ಮುಖಂಡರನ್ನೊಳಗೊಂಡಂತೆ ಹಲವರು ಕುಡುತಿನಿ ಗ್ರಾಮದ ಆಂಜನೇಯ ಸ್ವಾಮಿ ದೇಗುಲದಿಂದ ವೇಣಿವೀರಾಪುರ ಬಳಿಯಿರುವ ಸ್ಪಾಂಜ್ ಐರನ್ ಕಾರ್ಖಾನೆವರೆಗೆ ಬೃಹತ್ ಪಾದಯಾತ್ರೆ ಕೈಗೊಂಡರು.
ಕುಡುತಿನಿ-ವೇಣಿವೀರಾಪುರ ಗ್ರಾಮದ ಸುತ್ತಲೂ ಇರುವ ಸ್ಪಾಂಜ್ ಐರನ್ ಕಾರ್ಖಾನೆಗಳಿಂದ ಹೊರಸೂಸುವ ಧೂಳಿನಿಂದಾಗಿ ಇಡೀ ಕುಡುತಿನಿ ಗ್ರಾಮವೇ ಧೂಳುಮಯವಾಗಿದೆ. ಇದರಿಂದ ಆರೋಗ್ಯ ಹದಗೆಡುವ ಸ್ಥಿತಿ ತಲುಪಿದೆ. ಮಾಲಿನ್ಯ ನಿಯಂತ್ರಣ ಇಲಾಖೆಯಾಗಲಿ, ಜಿಲ್ಲಾಡಳಿತವಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿಂದೆ ನೀಡಿದ್ದ ಗಡುವು ಮುಗಿದಿದೆ. ಆದರೂ ನಮ್ಮ ಬೇಡಿಕೆ ಈಡೇರಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಪೊಲೀಸರೊಂದಿಗೆ ವಾಗ್ವಾದ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಪಾದಯಾತ್ರೆಯುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಇದನ್ನೂ ಓದಿ: 20ನೇ ದಿನಕ್ಕೆ ಕಾಲಿರಿಸಿದ ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ವಿರೋಧಿ ಹೋರಾಟ