ಬಳ್ಳಾರಿ: ಮಾಧ್ಯಮಗಳು ಅತೃಪ್ತ ಶಾಸಕರ ಪಟ್ಟಿಯಲ್ಲಿ ತಮ್ಮ ಹೆಸರು ಪ್ರಸ್ತಾಪ ಮಾಡಿರೋದಕ್ಕೆ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಿದ ಹಿಂದಿನ ಕಾರಣವೇನು ಎಂಬುದು ನನಗೆ ತಿಳಿದಿಲ್ಲ. ಅನಾವಶ್ಯಕವಾಗಿ ಮಾಧ್ಯಮಗಳು ನನ್ನ ಹೆಸರನ್ನು ಬಿತ್ತರಿಸುತ್ತಿವೆ. ಇಂತಹ ಸುಳ್ಳು ಸುದ್ದಿಗೆ ನನ್ನ ಕ್ಷೇತ್ರದ ಮತದಾರರು ಕಿವಿಗೊಡಬಾರದೆಂದರು. ಅದರಿಂದ ನನ್ನ ಕ್ಷೇತ್ರದ ಜನತೆ ಹಾಗೂ ಕಾರ್ಯಕರ್ತರಲ್ಲಿ ಅನಾವಶ್ಯಕ ಗೊಂದಲ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ.
ನಾನು ಕಾಂಗ್ರೆಸ್ ಬಿಟ್ಟು ಯಾವ ಪಕ್ಷಕ್ಕೂ ಹೋಗುವ ಪ್ರಸಂಗವೇ ಇಲ್ಲ. ನಾನು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ಇರುವೆ. ನಾನು ಬೆಳಗ್ಗೆಯಿಂದ ಕುರುಗೋಡು ಪಟ್ಟಣದ ವಿವಿಧ ವಾರ್ಡುಗಳಿಗೆ ಭೇಟಿ ಕೊಟ್ಟು ಸಾರ್ವಜನಿಕರ ಕುಂದು ಕೊರತೆ ಆಲಿಸುತ್ತಿರುವೆ. ಕೆಲಸದಲ್ಲಿ ಬ್ಯುಸಿಯಾಗಿದ್ದರಿಂದ ಯಾರ ಫೋನ್ ಪಿಕ್ ಮಾಡಲಿಲ್ಲ. ನಾನು ಕ್ಷೇತ್ರ ಬಿಟ್ಟು ಎಲ್ಲಿಗೂ ಹೋಗಲ್ಲ ಎಂದು ಶಾಸಕ ಗಣೇಶ್ ಸ್ಪಷ್ಟಪಡಿಸಿದ್ದಾರೆ.