ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಗಡಿಯಂಚಿನ ಗ್ರಾಮವಾದ ರಾರಾವಿಯಲಿ ಮದ್ಯದಂಗಡಿಗಳು ಓಪನ್ ಆಗಿವೆ. ನೆರೆಯ ಆಂಧ್ರಪ್ರದೇಶದ ಆದೋನಿಯ ಸುತ್ತ ಮುತ್ತಲಿನ ಗ್ರಾಮಸ್ಥರು ಮದ್ಯ ಖರೀದಿಗೆ ಗ್ರಾಮಕ್ಕೆ ದಾಂಗುಡಿ ಇಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ನೆರೆಯ ಆಂಧ್ರಪ್ರದೇಶದ ಆದೋನಿ ತಾಲೂಕಿಗೂ ಈ ರಾರಾವಿ ಗ್ರಾಮಕ್ಕೆ ಕೆಲವೇ ಕಿಲೋಮೀಟರ್ಗಳ ಅಂತರವಿದೆ. ಹೀಗಾಗಿ, ಆದೋನಿ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳ ಮದ್ಯಪ್ರಿಯರು ರಾರಾವಿ ಗ್ರಾಮದ ಮದ್ಯದಂಗಡಿಗಳಿಗೆ ಮದ್ಯ ಖರೀದಿಸಲು ಹಗಲು- ರಾತ್ರಿಯೆನ್ನದೇ ಬರುತ್ತಿದ್ದಾರೆ. ಮದ್ಯ ಖರೀದಿಸಿದ್ದಲ್ಲದೇ ಅಲ್ಲಿಯೇ ಮದ್ಯ ಸೇವನೆ ಮಾಡಿ ಗ್ರಾಮದ ಮಹಿಳೆಯರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡೋದು, ಲೈಂಗಿಕ ದೌರ್ಜನ್ಯ ಎಸಗುವ ಸನ್ನಿವೇಶಗಳು ನಡೆಯುತ್ತಿರೋದು ಬೆಳಕಿಗೆ ಬಂದಿದೆ.
ಇದಲ್ಲದೇ, ನೆರೆಯ ಆಂಧ್ರಪ್ರದೇಶದ ಗಡಿಗ್ರಾಮಗಳಲ್ಲಿರುವ ಮದ್ಯ ದಂಗಡಿಗಳನ್ನ ಸಂಪೂರ್ಣವಾಗಿ ಬಂದ್ ಮಾಡುವಂತೆ ಜಿಲ್ಲಾಡಳಿತ ಇತ್ತೀಚೆಗೆ ಆದೇಶ ಹೊರಡಿಸಿತ್ತಾದರೂ ರಾರಾವಿ ಗ್ರಾಮದ ಮಟ್ಟಿಗೆ ಆ ಆದೇಶ ಅನ್ವಯಿಸುತ್ತಿಲ್ಲ ಎಂದು ಗ್ರಾಮದ ಯುವಕರು ದೂರಿದ್ದಾರೆ. ಗ್ರಾಮದ ಯುವಕರು ಮಾತನಾಡಿ, ಮದ್ಯದಂಗಡಿ ಓಪನ್ ಮಾಡಿ ರಾಜಾರೋಷವಾಗಿ ಮದ್ಯ ಮಾರಾಟ ಮಾಡಲು ಇವರಿಗೆ ಅನುಮತಿ ಕೊಟ್ಟವರು ಯಾರು? ಎಂಬುದನ್ನ ಮೊದಲು ಪತ್ತೆಹಚ್ಚಿ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಗಡಿಯಂಚಿನ ಗ್ರಾಮ ರಾರಾವಿಯಲ್ಲಿ ಇಷ್ಟೆಲ್ಲ ರಾಜಾರೋಷವಾಗಿ ಮದ್ಯ ಮಾರಾಟ ನಡೆಯುತ್ತಿದ್ದರೂ ಸಿರುಗುಪ್ಪ ತಾಲೂಕು ಆಡಳಿತ ಕೈಚೆಲ್ಲಿ ಕುಳಿತಿದೆ ಎಂದು ಗ್ರಾಮಸ್ಥರು ಆರೊಪಿಸಿದ್ದಾರೆ. ರಾರಾವಿ ಗ್ರಾಮದಲ್ಲಿ ಈ ಮದ್ಯ ಮಾರಾಟವನ್ನ ತಡೆಯುವಂತೆ ಆಗ್ರಹಿಸಿ ಗ್ರಾಮದ ಯುವಕರಾದ ಯಲ್ಲಪ್ಪ ನಾಯಕ, ಬಸಪ್ಪ, ಯಲ್ಲಪ್ಪ ಎನ್, ಶ್ರೀಧರ, ಹುಸೇನಪ್ಪ, ಪಾಂಡು, ವೆಂಕಟೇಶ, ವೀರಭಧ್ರ, ರುದ್ರಪ್ಪ ನೇತೃತ್ವದ ತಂಡವು ಸಿರುಗುಪ್ಪ ತಹಶೀಲ್ದಾರ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.