ಹೊಸಪೇಟೆ: ನಗರದ ಹೊರ ವಲಯದಲ್ಲಿರುವ ಜಂಬುನಾಥ ಹಳ್ಳಿ ಪ್ರದೇಶದ ರಾಯರ ಕೆರೆ ಬಳಿ ಚಿರತೆ, ಮೇಕೆ ಮರಿಯೊಂದನ್ನು ಹೊತ್ತೊಯ್ದ ಘಟನೆ ಜರುಗಿದೆ.
ರಾಮಬಾಬು ಬಿದಿರು ಪಾಳ್ಯ ಪ್ರದೇಶದ ಕನಕಪ್ಪ ಎಂಬ ರೈತನಿಗೆ ಸೇರಿದ ಮೇಕೆ ಮರಿಯನ್ನು ಹೊತ್ತೊಯ್ದಿದೆ. ರಾಯರ ಕರೆ ಮೇಲ್ಭಾಗದಲ್ಲಿರುವ ಅರಣ್ಯ ಪ್ರದೇಶದಲ್ಲಿ ಆಗಾಗ ಚಿರತೆ ಕಾಣಿಸಿಕೊಳ್ಳುತ್ತಿತ್ತು. ಪ್ರತಿ ದಿನ ಕೃಷಿ ಕೆಲಸಕ್ಕಾಗಿ ಹೊಲಗದ್ದೆಗಳಿಗೆ ಬಂದು ಹೋಗುತ್ತಿದ್ದ ರೈತರು ಭಯಗೊಂಡು, ಈ ಕುರಿತು ಅರಣ್ಯ ಇಲಾಖೆಯವರ ಗಮನಕ್ಕೆ ತಂದಿದ್ದರು.
ಆದರೆ ಅಧಿಕಾರಿಗಳು ಈ ಕುರಿತು ನಿರ್ಲಕ್ಷ್ಯ ತೋರಿದ್ದು, ಇದೀಗ ಮೇಕೆ ಮರಿಯನ್ನು ಹೊತ್ತೊಯ್ದ ಹಿನ್ನೆಲೆ ಕೂಡಲೇ ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇನ್ನು ಕಳೆದ ನಾಲ್ಕು ತಿಂಗಳ ಹಿಂದೆ ರಾಯರ ಕೆರೆಗೆ ಹೊಂದಿಕೊಂಡಿದ್ದ ಜೋಳದ ರಾಶಿ ಗುಡ್ಡದಿಂದ ಕರಡಿಯೊಂದು ಇಳಿದು, ಗುಡ್ಡದ ಕೆಳಭಾಗದಲ್ಲಿರುವ ವಿವೇಕಾನಂದ ನಗರ ಬಡವಾಣೆಗೆ ಬಂದು ಹೋಗಿತ್ತು. ಪುನಃ ಗುಡ್ಡದಿಂದ ಹಾದು ರಾಯರ ಕೆರೆಯಲ್ಲಿ ಕಣ್ಮೆರೆಯಾಗಿತ್ತು.