ವಿಜಯನಗರ: ಡಿಪ್ಲೊಮಾ ಇನ್ ಮೈನಿಂಗ್ ಇಂಜಿನಿಯರಿಂಗ್ ಕೋರ್ಸ್ ಎಂದರೆ ಹುಡುಗರಿಗೆ ಮಾತ್ರ ಸೀಮಿತವಾಗಿತ್ತು. ಆದ್ರೆ ಗ್ರಾಮೀಣ ಭಾಗದ ಹೆಣ್ಣು ಮಗಳೊಬ್ಬರು ಈ ಕೋರ್ಸ್ನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯ ಟಿ.ಎಂ.ಎ.ಇ ಸಂಸ್ಥೆಯ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮಾ ಇನ್ ಮೈನಿಂಗ್ ಇಂಜಿನಿಯರಿಂಗ್ ಕೋರ್ಸ್ ಆರಂಭವಾಗಿ (2008 ರಲ್ಲಿ ಆರಂಭ) ಸುಮಾರು ಹದಿನಾಲ್ಕು ವರ್ಷಗಳಲ್ಲಿ ಪ್ರಪ್ರಥಮ ಬಾರಿಗೆ ಹೆಣ್ಣು ಮಗಳೊಬ್ಬರು ಈ ಕೋರ್ಸ್ಗೆ ಪ್ರವೇಶ ಪಡೆದು ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದ್ದಾರೆ.
ಹೊಸಪೇಟೆ ತಾಲೂಕಿನ ಜಂಬುನಾಥಹಳ್ಳಿ ಎಂ.ಎಂ.ಎಲ್ ಕ್ಯಾಂಪಿನ ತಾಯಮ್ಮ ಈ ಹೆಗ್ಗಳಿಕೆಗೆ ಪಾತ್ರವಾಗಿರುವ ಯುವತಿ. ಟಿ.ಎಂ.ಎ.ಇ ಪಾಲಿಟೆಕ್ನಿಕ್ ಕಾಲೇಜಿನ ಡಿಪ್ಲೊಮಾ ಇನ್ ಮೈನಿಂಗ್ ಕೋರ್ಸ್ಗೆ ಪ್ರಸಕ್ತ ಸಾಲಿನಲ್ಲಿ ಸೇರಿರುವ ಸುಮಾರು 60 ವಿದ್ಯಾರ್ಥಿಗಳಲ್ಲಿ ತಾಯಮ್ಮ ಮಾತ್ರ ಏಕೈಕ ವಿದ್ಯಾರ್ಥಿನಿ. ಸಾಮಾನ್ಯವಾಗಿ ಹೆಣ್ಣು ಮಕ್ಕಳು ಕಾಲಿಡದ ಈ ಕ್ಷೇತ್ರದಲ್ಲಿ ತಾಯಮ್ಮ ಸಾಧನೆ ಮಾಡಬೇಕೆಂಬ ಛಲದಿಂದ ಈ ಕೋರ್ಸ್ನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ.
ತಾಲೂಕಿನ ಜಂಬುನಾಥಹಳ್ಳಿಯ ಎಂ. ಎಂ. ಎಲ್ ಕ್ಯಾಂಪಿನ ಆಸುಪಾಸಿನಲ್ಲಿ ಬರೀ ಗಣಿಗಾರಿಕೆಯದ್ದೇ ಕಾರುಬಾರು. ಗಣಿಗಾರಿಕೆ ಆರ್ಭಟದ ನಡುವೆಯೇ ಬೆಳೆದಿರುವ ತಾಯಮ್ಮಳಿಗೆ ತಾನೊಂದು ದಿನ ಗಣಿಗಾರಿಕೆಯ ಉದ್ಯಮದಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಆಸೆ. ಆದರೆ, ಗಂಡುಮಕ್ಕಳಿಂದ ತುಂಬಿರುವ ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ಮನಸ್ಸು ಮಾಡಿರುವ ತಾಯಮ್ಮ ಈಗ ಆ ನಿಟ್ಟಿನಲ್ಲಿ ಪ್ರಥಮ ಹೆಜ್ಜೆಯಾಗಿ ಡಿಪ್ಲೋಮಾ ಇನ್ ಮೈನಿಂಗ್ ಕೋರ್ಸ್ ಅನ್ನು ಸೇರಿದ್ದಾರೆ. ಡಿಪ್ಲೋಮಾ ಮುಗಿಸಿದ ನಂತರ ಮೈನಿಂಗ್ ವಲಯದಲ್ಲಿ ಉದ್ಯೋಗವಕಾಶಗಳು ತೆರೆದುಕೊಳ್ಳುವ ಆಗಾಧ ಸಾಧ್ಯತೆಗಳಿರುವುದರಿಂದ ತಾಯಮ್ಮ ದೃಢ ನಿಶ್ಚಯದಿಂದ ವಿದ್ಯಾಭ್ಯಾಸ ಮುಂದುವರೆಸುವ ಪ್ರಯತ್ನದಲ್ಲಿದ್ದಾರೆ.
ಮೈನಿಂಗ್ ವಲಯದಲ್ಲಿ ಬದುಕು ಕಟ್ಟಿಕೊಳ್ಳುವ ಆಸೆ: ಕೂಲಿ ನಾಲಿ ಮಾಡಿ ತನ್ನನ್ನು ಇಲ್ಲಿಯವರೆಗೂ ಓದಿಸಿರುವ ತಂದೆ-ತಾಯಿಗೆ ಆಸರೆಯಾಗುವ ಮತ್ತು ತನ್ನ ಕಾಲ ಮೇಲೆ ತಾನು ಸ್ವಾವಲಂಬಿಯಾಗಿ ನಿಲ್ಲುವ ಮಹದಾಸೆಯಿಂದ ತಾಯಮ್ಮ ಎಲ್ಲ ಕಷ್ಟ ಕಾರ್ಪಣ್ಯಗಳನ್ನು ಬದಿಗಿಟ್ಟು ವಿದ್ಯಾಭ್ಯಾಸ ಮುಗಿಸಿದ್ದಾರೆ. ಇದೀಗ ಮೈನಿಂಗ್ ವಲಯದಲ್ಲಿ ಬದುಕು ಕಟ್ಟಿಕೊಳ್ಳಬೇಕೆಂಬುದು ಅವರ ಗುರಿಯಾಗಿದೆ.
ತಾಯಮ್ಮಳ ಪೋಷಕರಿಗೆ ಐದು ಜನ ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನಿದ್ದಾನೆ. ಇವರಲ್ಲಿ ತಾಯಮ್ಮ ನಾಲ್ಕನೆಯವರು. ಹತ್ತನೇ ತರಗತಿಯಲ್ಲಿ ಶೇ. 80 ರ ಫಲಿತಾಂಶದೊಂದಿಗೆ ಉತ್ತೀರ್ಣರಾದ ತಾಯಮ್ಮ ಡಿಪ್ಲೋಮಾ ಇನ್ ಮೈನಿಂಗ್ ಕೋರ್ಸ್ಗೆ ಸೇರುತ್ತೇನೆ ಎಂಬ ಅನಿಸಿಕೆ ವ್ಯಕ್ತಪಡಿಸಿದಾಗ ಅವರ ಪೋಷಕರು ಸಮ್ಮತಿಸಿ, ಪ್ರೋತ್ಸಾಹ ನೀಡುತ್ತಿದ್ದಾರೆ.
ಪ್ರಾಂಶುಪಾಲರಿಂದ ಮೆಚ್ಚುಗೆ: ಡಿಪ್ಲೊಮಾ ಇನ್ ಮೈನಿಂಗ್ ಇಂಜಿನಿಯರಿಂಗ್ ಕೋರ್ಸ್ ಕರ್ನಾಟಕದ ಹಟ್ಟಿ, ಕೆ.ಜಿ.ಎಫ್ ಹಾಗೂ ಹೊಸಪೇಟೆಯಲ್ಲಿ ಮಾತ್ರ ಇರುವುದು. ಇದುವರೆಗೆ ಯಾವುದೇ ಯುವತಿ ಈ ಕೋರ್ಸ್ಗೆ ಸೇರಿರಲಿಲ್ಲ. ಇದೇ ಮೊದಲ ಬಾರಿಗೆ ತಾಯಮ್ಮ ಈ ಕೋರ್ಸ್ಗೆ ಪ್ರವೇಶ ಪಡೆಯುತ್ತೇನೆ ಎಂದು ಬಂದಾಗ ಅಚ್ಚರಿಯಾಯಿತು. ಬರೀ ಹುಡುಗರೇ ಇರುವ ಈ ಕೋರ್ಸ್ನಲ್ಲಿ ಏಕೈಕ ಹುಡುಗಿಯಾಗುತ್ತಿಯಾ ಯೋಚಿಸಿ ನೋಡಿ ಎಂದಾಗ, ಮಾರ್ಗದರ್ಶನಕ್ಕೆ ಗುರು ಹಿರಿಯರಾದ ನೀವು ಇರುವಾಗ ಯೋಚಿಸುವುದೇನು? ಎಂಬ ಮರು ಪ್ರಶ್ನೆ ಹಾಕುವ ಮೂಲಕ ತಾಯಮ್ಮ ಆತ್ಮವಿಶ್ವಾಸ ಪ್ರದರ್ಶಿಸಿದರು. ನಿಜವಾಗಲೂ ತಾಯಮ್ಮ ಅಂದುಕೊಂಡ ಗುರಿಯನ್ನು ಸಾಧಿಸುತ್ತಾರೆ ಎಂದು ಎಂ.ಎ.ಇ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ವಿ. ವೈ ಉಮಾಶಂಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಓದಿ: ಟ್ರ್ಯಾಕ್ಟರ್ ಟ್ರಾಲಿ, ಕೃಷಿ ಉಪಕರಣಗಳ ಕಳವು ಪ್ರಕರಣ : ಆರೋಪಿಗಳ ಬಂಧನ