ಹೊಸಪೇಟೆ: ಐತಿಹಾಸಿಕ ಸುಪ್ರಸಿದ್ಧ ಹಂಪಿಯ ವಿಜಯನಗರ ಕಾಲದಲ್ಲಿ ಮುತ್ತು, ರತ್ನ, ವಜ್ರ ಮಾರಾಟ ಮಾಡುವ ಮಂಟಪಗಳು ಸರಿಯಾದ ನಿರ್ವಹಣೆ ಇಲ್ಲದೇ ಅವಸಾನದ ಅಂಚಿಗೆ ತಲುಪುತ್ತಿವೆ.
ಇಲ್ಲಿನ ಪ್ರಸಿದ್ಧ ವಿರೂಪಾಕ್ಷ ಬಜಾರ್, ಕೃಷ್ಣಾ ಬಜಾರ್, ಸೊಳೆ ಬಜಾರ್, ಪಾನ್ ಸುಪಾರಿ ಬಜಾರ್, ವಿಠ್ಠಲ ಬಜಾರ್ ಮುಂತಾದ ಸಾಲು ಮಂಟಪಗಳು ನಿರ್ವಹಣೆ ಇಲ್ಲದೇ ನೆಲ ಕಚ್ಚುತ್ತಿವೆ. ಈಗಾಗಲೇ ಹೆಚ್ಚಿನ ಮಂಟಪಗಳ ಮೇಲ್ಛಾವಣಿ ಮೇಲೆ ಮಣ್ಣು ಶೇಖರಣೆಗೊಂಡು ಹುಲ್ಲು ಬೆಳೆದಿದೆ.
ಮಂಟಪಗಳ ಸೌಂದರ್ಯ ಕುಗ್ಗಿದ್ದು, ಯಾವುದೇ ಹಂತದಲ್ಲಿ ಮೇಲ್ಛಾವಣಿ ಬೀಳುವ ಆತಂಕ ಎದುರಾಗಿದೆ. ಐತಿಹಾಸಿಕ ಕಂಬಗಳು ನೆಲಕಚ್ಚಿವೆ. ಇಷ್ಟಾದರೂ ಅಧಿಕಾರಿಗಳು ಯಾವುದೇ ನಿರ್ವಹಣೆಗೆ ಮುಂದಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಐತಿಹಾಸಿಕ ಮಂಟಪಗಳಲ್ಲಿ ಬೈಕ್ ಪಾರ್ಕಿಂಗ್: ಸುಪ್ರಸಿದ್ಧ ಮಂಟಪಗಳ ಒಳಗಡೆ ಬೈಕ್ಗಳನ್ನು ನಿಲ್ಲಿಸಲಾಗುತ್ತಿದೆ. ಅಲ್ಲದೇ, ಜನರು ಕುಳಿತುಕೊಂಡು ಊಟ ಮಾಡುತ್ತಿದ್ದಾರೆ. ಎಲ್ಲೆಂದರಲ್ಲಿ ಆಹಾರದ ಪೊಟ್ಟಣಗಳು ಬಿದ್ದಿವೆ ಎಂದು ಪ್ರವಾಸಿಗರು ಬೇಸರ ವ್ಯಕ್ತಪಡಿಸಿದರು.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ವಿಶ್ವ ಪರಂಪರೆ ಹಂಪಿ ನಿರ್ವಹಣಾ ಪ್ರಾಧಿಕಾರದ ನಡುವೆ ಸಮನ್ವಯದ ಕೊರತೆ ಇದೆ. ಹೀಗಾಗಿ ವಿಶ್ವ ವಿಖ್ಯಾತಿಯ ಹಂಪಿಯು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ.
ವಿಜಯನಗರ ಕಾಲದಲ್ಲಿ ಪ್ರಸಿದ್ಧಿ ಗಳಿಸಿಕೊಂಡ ಈ ಬಜಾರ್ನಲ್ಲಿನ ಮಂಟಪಗಳಲ್ಲಿ ಅಂದಿನ ಕಾಲದಲ್ಲಿ ನಾನಾ ವರ್ಗದ ವರ್ತಕರು ಅಂಗಡಿಗಳನ್ನು ಮಾಡಿಕೊಂಡಿದ್ದರು.
ಭಾರತೀಯ ಸರ್ವೇಕ್ಷಣಾ ಇಲಾಖೆಯ ಉಪ ಅಧೀಕ್ಷಕ ಕಾಳಿಮುತ್ತು ಈಟಿವಿ ಭಾರತದೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಈಗಾಗಲೇ ವಿರೂಪಾಕ್ಷೇಶ್ವರ ಗೋಪುರ ಮುಂಭಾಗದ ಸಾಲು ಮಂಟಪಗಳನ್ನು ಜೀರ್ಣೋದ್ಧಾರ ಮಾಡಲಾಗುತ್ತಿದೆ. ಉಳಿದ ಸಾಲು ಮಂಟಪಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು. ಅಲ್ಲದೇ, ಸ್ಮಾರಕ ಮೇಲ್ಭಾಗದಲ್ಲಿ ಸ್ವಚ್ಛತೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.