ಹೊಸಪೇಟೆ : ಕೊರೊನಾ ವೈರಸ್‌ನಿಂದಾಗಿ ಹಂಪಿ ಸ್ಮಾರಕಗಳ ನಿರ್ವಹಣೆಗೆ ಸಮಸ್ಯೆಯಾಗಿದೆ. ವಿಶ್ವ ಪಾರಂಪರಿಕ ತಾಣವೆಂದು ಘೋಷಣೆಯಾಗಿರುವ ಹಂಪಿಯು ಇದೀಗ ನಿರ್ವಹಣೆ ಇಲ್ಲದೆ ಸೊರಗಿದೆ.
ಕೇಂದ್ರ ಸರ್ಕಾರದ ಅಧೀನಕ್ಕೊಳಪಟ್ಟಿರುವ ಈ ಐತಿಹಾಸಿಕ ಪ್ರದೇಶ ಸುಮಾರು 25 ಸಾವಿರ ಸ್ಕ್ವೇರ್ ಕಿ.ಮೀ ಹೊಂದಿದೆ. ವಿಭಿನ್ನ ಕಲಾ ಸಂಸ್ಕೃತಿಗಳಿಗೆ ಸಾಕ್ಷಿಯಾಗಿದೆ. ಆದರೆ, ಅನುದಾನ, ಆದ್ಯತೆ, ಸಿಬ್ಬಂದಿ ಕೊರತೆಯಿಂದ ಸಂಸ್ಕೃತಿಗಳ ತವರೂರಾಗಿರುವ ಇಲ್ಲಿನ ಸ್ಮಾರಕಗಳು ಇದೀಗ ನಶಿಸುವ ಸ್ಥಿತಿ ತಲುಪಿವೆ.
ಅನುದಾನ ಹಾಗೂ ಸಿಬ್ಬಂದಿ ಕೊರತೆ : ಸ್ಮಾರಕಗಳ ನಿರ್ವಹಣೆಗೆ ಹಾಗೂ ಕ್ಷೇತ್ರದ ಅಬಿವೃದ್ಧಿಗಾಗಿ ಪ್ರತೀ ವರ್ಷ ₹5 ಕೋಟಿ ಅನುದಾನ ನೀಡಬೇಕು. ಆದರೆ, ಅಷ್ಟು ಅನುದಾನವೂ ಸಿಕ್ಕಲ್ಲ. ಅಲ್ಲದೇ, ಅದು ಒಂದೇ ಹಂತದಲ್ಲಿಯೂ ಬರಲ್ಲ ಅಂತಾರೆ ಅಧಿಕಾರಿಗಳು. ಹಂಪಿ ಸಂರಕ್ಷಣೆಗೆ ಟೆಕ್ನಿಕಲ್, ಸಂರಕ್ಷಣಾ ಸಹಾಯಕರು, ಎಂಟಿಎಸ್ (ಮಲ್ಟಿ ಟಾಸ್ಕ್ ಸ್ಟಾಫ್) ಸೇರಿ ಇನ್ನಿತರ ಸಿಬ್ಬಂದಿ ಅವಶ್ಯಕತೆ ಇದೆ. ಆದರೆ, ನಿರ್ವಹಣೆ ಮಾಡುವಷ್ಟು ಸಿಬ್ಬಂದಿ ಮಾತ್ರ ನೇಮಿಸಲಾಗಿದೆ.
ಹಣ ಬಳಕೆಗಿಲ್ಲ ಸ್ವಾತಂತ್ರ: ಕಮಲಾಪುರ ವಸ್ತು ಸಂಗ್ರಹಾಲಯ, ಲೋಟಸ್ ಮಹಲ್, ವಿಜಯ ವಿಠ್ಠಲ ದೇವಸ್ಥಾನ ವೀಕ್ಷಣೆಗೆ ಸ್ವದೇಶಿಗರಿಂದ 35 ರೂ. ಹಾಗೂ ವಿದೇಶಿಗರಿಂದ 550 ರೂ.ಪಡೆಯಲಾಗುತ್ತದೆ. ವರ್ಷಕ್ಕೆ ಲಕ್ಷಾಂತರ ಸ್ವದೇಶಿ-ವಿದೇಶಿಗರು ಇಲ್ಲಿನ ಶಿಲ್ಪ ಕಲೆಯ ಸೌಂದರ್ಯ ಸವಿಯಲು ಆಗಮಿಸುತ್ತಾರೆ. ಇದರಿಂದ ಸಂಗ್ರಹವಾಗುವ ಹಣ ಕೇಂದ್ರ ಸರ್ಕಾರದ ಮಿನಿಸ್ಟರ್ ಅಫ್ ಕಲ್ಚರ್ ವಿಭಾಗಕ್ಕೆ ನೇರ ಜಮೆಯಾಗುತ್ತೆ. ಹಾಗಾಗಿ ಸರ್ಕಾರ ನೀಡಿದ ಅನುದಾನದಲ್ಲಿಯೇ ಹಂಪಿಯ ಅಭಿವೃದ್ಧಿ ಕಾರ್ಯ ಮಾಡುವ ಅನಿವಾರ್ಯತೆ ಇದೆ.
ಸ್ಮಾರಕಗಳಿಗೆ ಧಕ್ಕೆ ಮಾಡಿದ ವರುಣ : ಕಳೆದೊಂದು ತಿಂಗಳಿನಿಂದ ಹೊಸಪೇಟೆ ಭಾಗದಲ್ಲಿ ಉತ್ತಮ ಮಳೆಯಾದ ಪರಿಣಾಮ ಹಳೆಯ ಸ್ಮಾರಕಗಳಿಗೆ ಧಕ್ಕೆಯಾಗುತ್ತಿದೆ. ವಿರೂಪಾಕ್ಷೇಶ್ವರ ಸಾಲುಮಂಟಪ ಸ್ಮಾರಕದ ಮೇಲ್ಭಾವಣಿ, ಬಸವಣ್ಣ ಸ್ಮಾರಕದ ಕಲ್ಲುಗಳು ಹಾಗೂ ವಿಜಯ ವಿಠ್ಠಲ ದೇವಸ್ಥಾನದ ಬಳಿಯ ಕಂಬಗಳು ಧರೆಗೆ ಉರುಳುತ್ತಿವೆ.
ಹಂಪಿಗೆ ವಿಶ್ವಮಾನ್ಯತೆ: ಉನ್ನತ ಸಾಂಸ್ಕೃತಿಕ ಪರಂಪರೆ ಮತ್ತು ಚಾರಿತ್ರಿಕ ಮೌಲ್ಯ ಹೊಂದಿರುವ ಹಂಪಿಯನ್ನು ಯುನೆಸ್ಕೊ ಸಂಸ್ಥೆಯು 1986ರಲ್ಲಿ ವಿಶ್ವಪರಂಪರೆ ನೆಲೆ ಎಂದು ಘೋಷಿಸಿದೆ. ಹಂಪಿ ಭಾರತೀಯ ಪರಂಪರೆಗೆ ಕಿರೀಟ. ಹಾಗಾಗಿ, ಇದನ್ನು ಸಂರಕ್ಷಿಸುವ ಕಾರ್ಯ ಆಗಬೇಕು. ವಿಶ್ವಮಾನ್ಯತೆಗೆ ತಕ್ಕಂತೆ ಹಂಪಿಗೆ ಸೌಲಭ್ಯ ಒದಗಿಸುವುದು ಅತ್ಯಂತ ಅವಶ್ಯಕ.
ಭಾರತೀಯ ಸರ್ವೇಕ್ಷಣಾ ಪುರಾತತ್ವ ಇಲಾಖೆಯ ಉಪಾಧೀಕ್ಷಕ ಎಂ.ಕಾಳಿಮುತ್ತು ಮಾತನಾಡಿ, ಸ್ಮಾರಕಗಳ ಅಭಿವೃದ್ಧಿಗಾಗಿ ಸಾಕಷ್ಟು ಬಾರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈವರೆಗೂ ಸಹ ಸರ್ಕಾರ ನೀಡುವ ಅನುದಾನದಲ್ಲಿಯೇ ಹಂಪಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸ್ಮಾರಕಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮುಂದೆಯೂ ಸಹ ನೀಡಲಾಗುವುದು ಎಂದು ತಿಳಿಸಿದ್ದಾರೆ.