ಬಳ್ಳಾರಿ: ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಕುದುರೆಮುಖ ಐರನ್ ಓರ್ ಕಂಪನಿಗೆ ಜಿಲ್ಲೆಯ ಸಂಡೂರು ತಾಲೂಕಿನ ದೋಣಿಮಲೈ - ಸ್ವಾಮಿಮಲೈಯ ನಡುವೆ ಗಣಿಗಾರಿಕೆ ನಡೆಸಲು ಅನುಮೋದನೆ ಸಿಕ್ಕಿದೆಯಾ ಎಂಬ ಪ್ರಶ್ನೆಗೆ ಜಿಲ್ಲೆಯ ಉಪ ಅರಣ್ಯ ಇಲಾಖೆಯಿಂದ ನಕಾರಾತ್ಮಕ ಅಭಿಪ್ರಾಯ ವ್ಯಕ್ತವಾಗಿದೆ.
ಸಂಡೂರಿನ ದೋಣಿ ಮಲೈ- ಸ್ವಾಮಿಮಲೈ ನಡುಭಾಗದಲ್ಲಿ ಕುದುರೆಮುಖ ಐರನ್ ಓರ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಅಂದಾಜು 401ರಿಂದ 482 ಎಕರೆಯಲ್ಲಿ ಗಣಿಗಾರಿಕೆ ನಡೆಸಲು ಪ್ರಾಥಮಿಕ ಅನುಮೋದನೆ ನೀಡುವಂತೆ ಕೋರಿ ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿದ್ಧರಾಮ ಚಳ್ಕಾಪುರೆ ಎಂಬುವವರ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಇನ್ನು ಕುದುರೆಮುಖ ಐರನ್ ಓರ್ ಕಂಪನಿಗೆ ಪ್ರಾಥಮಿಕ ಹಂತದ ಅನುಮೋದನೆ ಸಿಕ್ಕಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿ ಕೂಡ ಬಿತ್ತರ ಆಗಿತ್ತು. ಆದರೆ ವಾಸ್ತವವಾಗಿ ಈ ಪ್ರಾಥಮಿಕ ಹಂತದ ಅನುಮೋದನೆ ಆಗಿರೋದರ ಮಾಹಿತಿಯೂ ಈವರೆಗೂ ಅರಣ್ಯ ಇಲಾಖೆಗೆ ಲಭ್ಯವಾಗಿಲ್ಲ. ಈ ಸಂಬಂಧ ಈಟಿವಿ ಭಾರತದ ಪ್ರತಿನಿಧಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿದ್ಧರಾಮ ಚಳ್ಕಾಪುರೆ ಅವರು ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.
ನಮ್ಮಿಂದ ಕುದುರೆಮುಖ ಐರನ್ ಓರ್ ಕಂಪನಿಯ ಪ್ರಸ್ತಾವನೆಯನ್ನ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದರೀಗ ಪ್ರಾಥಮಿಕ ಹಂತದ ಅನುಮೋದನೆ ಸಿಕ್ಕಿದೆ ಅಂತ ಕೆಲ ಮಾಧ್ಯಮಗಳಲ್ಲಿ ಬಿತ್ತರವಾಗಿದೆ. ಆದರೆ ಈವರೆಗೂ ಅನುಮೋದನೆ ದೊರೆತಿರುವುದರ ಆದೇಶ ಪ್ರತಿ ಲಭ್ಯವಾಗಿಲ್ಲ. ಬಂದಮೇಲೆ ಅದರಲ್ಲಿ ಏನೇನು ಅನುಮೋದನೆ ಸಿಕ್ಕಿದೆ ಎಂದು ನೋಡಬೇಕಾಗುತ್ತೆ ಎಂದರು.
ಗಣಿಗಾರಿಕೆ ನಡೆಸಲು ಬಯಸುವವರು ಉಪ ಅರಣ್ಯ ಇಲಾಖೆಯ ಎರಡು ಹಂತದ ಫಾರೆಸ್ಟ್ ಕ್ಲಿಯರೆನ್ಸ್ ಪಡೆಯಬೇಕಾಗುತ್ತೆ. ಆ ಬಳಿಕ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಅರಣ್ಯ ಇಲಾಖೆಯ ಸರ್ಟಿಫಿಕೇಟ್ ಪಡೆದುಕೊಂಡು ಗಣಿಗಾರಿಕೆ ಆರಂಭಿಸಲು ಮುಂದಾಗಬೇಕು. ಕುದುರೆಮುಖ ಐರನ್ ಓರ್ ಕಂಪನಿಯೂ ಕೂಡ ಕೇಂದ್ರ ಸರ್ಕಾರದ ನಿಯಮಗಳು ಏನೇನಿವೆ ಅವುಗಳನ್ನು ಅನುಸರಿಸಲೇ ಬೇಕಾಗುತ್ತದೆ ಎಂದರು.