ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿಯ ಕಾಂಗ್ರೆಸ್ ಮುಖಂಡರು ಮಾಜಿ ಸಂಸದ ವಿ ಎಸ್ ಉಗ್ರಪ್ಪನವರ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಕೂಡ್ಲಿಗಿ ಸರ್ಕಾರಿ ಪ್ರವಾಸಿ ಮಂದಿರದ ಬಳಿ ನೂರಾರು ಕಾರ್ಯಕರ್ತರು ಜಮಾಯಿಸಿ ಉಗ್ರಪ್ಪನವರ ವಿರುದ್ಧ ಪ್ರತಿಭಟನೆ ನಡೆಸಿ ಘೋಷಣೆ ಕೂಗಿದರು. ಮಾಜಿ ಸಂಸದರು ಕೂಡ್ಲಿಗಿಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರೇಂದ್ರ ಕುಮಾರ ಹಾಗೂ ಕೆಪಿಸಿಸಿ ಸದಸ್ಯ ಉದಯರನ್ನು ಸೇರಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಆರು ಮಂದಿ ಮುಖಂಡರನ್ನು ಪಕ್ಷದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು. ಸಂಸದರ ಈ ಕ್ರಮವನ್ನು ಖಂಡಿಸಿ ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದರು.
ಕೂಡ್ಲಿಗಿ ಕಾಂಗ್ರೆಸ್ ಮುಖಂಡ ಕಾಟೇರ್ ಹಾಲೇಶ್ ಮಾತನಾಡಿ, ಕಾರಣವಿಲ್ಲದೇ ಸಂಸದರು ಆರು ಮಂದಿ ಮುಖಂಡರನ್ನು ಪಕ್ಷದಿಂದ ಅಮಾನತು ಮಾಡಿರುವುದು ಖಂಡನಾರ್ಹ. ಇದರ ಹಿಂದೆ ಉಗ್ರಪ್ಪನವರ ಕೈವಾಡವಿದ್ದು, ಉಪಚುನಾವಣೆಯಲ್ಲಿ ಹೆಚ್ಚಿನ ಮತಗಳನ್ನು ತಂದು ಕೊಟ್ಟಿದ್ದನ್ನು ಮರೆತಿರುವ ಅವರು, ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಸೋತ ಕಾರಣಕ್ಕೆ ಸ್ಥಳೀಯ ಮುಖಂಡರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ, ಅವರನ್ನು ಅಮಾನತುಗೊಳಿಸಿದ್ದಾರೆ ಎಂದು ದೂರಿದರು.
ಲೋಕಸಭಾ ಚುನಾವಣೆಯಲ್ಲಿ ಸೋಲುಂಡ ಉಗ್ರಪ್ಪನವರು ಈವರೆಗೂ ಕೂಡ್ಲಿಗಿ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ. ಯಾರದ್ದೋ ಮಾತು ಕೇಳಿ ಸ್ಥಳೀಯ ಮುಖಂಡರ ಬಗ್ಗೆ ಹಗುರವಾಗಿ ಮಾತನಾಡಿರುವ ಉಗ್ರಪ್ಪನವರನ್ನು ಕ್ಷೇತ್ರದ ಮತದಾರರು ಕ್ಷಮಿಸಲಾರರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಕಾರ್ಮಿಕ ಘಟಕದ ಅಧ್ಯಕ್ಷ ಡಿ.ರಾಘವೇಂದ್ರ, ಗ್ರಾಮ ಪಂಚಾಯತ್ ಸದಸ್ಯ ಮೊರಬ ವೀರಭದ್ರಪ್ಪ, ಮಹಿಳಾ ಘಟಕದ ಅಧ್ಯಕ್ಷೆ ನೇತ್ರಮ್ಮ, ಶಿವಪುರದ ಶಿವಯೋಗಿ, ಕ್ಯಾರಿ ರಮೇಶ, ಜಿ.ಲಕ್ಷ್ಮೀಪತಿ, ಎನ್.ನಾಗಜ್ಜ, ಗುಪ್ಪಾಲ ಸತೀಶ, ಸುರೇಶ್, ಹನುಮಂತಪ್ಪ, ತುಪ್ಪಾಕನಹಳ್ಳಿ ರಾಮೇಶ, ಕೆ.ತಿಪ್ಪೇಸ್ವಾಮಿ, ಅನ್ವರ್ ಬಾಷಾ, ಬಿ.ಕೊಟ್ರೇಶ್, ಎಲೆ ನಾಗರಾಜ, ಎ.ಈಶಪ್ಪ ಸೇರಿ ಮೊದಲಾದವರು ಭಾಗವಹಿಸಿದ್ದರು.