ಬಳ್ಳಾರಿ: ಜಿಲ್ಲೆಯಲ್ಲಿ ಕೊರೊನಾದಿಂದ ಮೃತರಾದ ಎಂಟು ಜನರ ಮೃತದೇಹವನ್ನು ಅಮಾನವೀಯವಾಗಿ ಸಂಸ್ಕಾರ ಮಾಡಿದನ್ನು ವಿರೋಧಿಸಿ, ಕನ್ನಡಪರ ಹೋರಾಟಗಾರ ವಾಟಳ್ ನಾಗರಾಜ್ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ನಡೆಸಿದರು.
ಕಾಯಿ, ಕರ್ಪೂರ ಹಚ್ಚಿ ಮೃತರ ಆತ್ಮಗಳಿಗೆ ಶಾಂತಿ ಕೋರಿದರು. ಬಳಿಕ ಮಾತನಾಡಿದ ಅವರು, ಕೊರೊನಾದಿಂದ ಮೃತಪಟ್ಟವರನ್ನು ಹಂದಿ,ನಾಯಿಗಳಿಗಿಂತ ಕೀಳಾಗಿ ಗುಂಡಿಯಲ್ಲಿ ಮುಚ್ಚಿ ಹಾಕಿದ್ದಾರೆ. ಇದನ್ನು ಮೊಬೈಲ್ನಲ್ಲಿ ವಿಡಿಯೋ ಮಾಡಿದವರಿಗೆ ಅಭಿನಂದನೆಗಳು ಎಂದಿದ್ದಾರೆ.
ಕೊರೊನಾದಿಂದ ಸತ್ತವರು ನನ್ನ ತಂದೆ-ತಾಯಿಗೆ ಸಮ:
ಕೊರೊನಾದಿಂದ ಸತ್ತವರು ನನ್ನ ತಂದೆ ತಾಯಿಗೆ ಸಮಾನರು ಎಂದು ವಾಟಳ್ ನಾಗರಾಜ್ ಹೇಳಿದ್ರು. ಒಬ್ಬ ಶಾಸಕ, ಸಂಸದ, ಮಂತ್ರಿ, ಅಧಿಕಾರಿ ಸತ್ರೆ ಈ ರೀತಿಯಾಗಿ ಗುಂಡಿಗೆ ಬೀಸಾಡುತ್ತೀರಾ ಎಂದು ಪ್ರಶ್ನೆ ಮಾಡಿದರು. ಬಿ.ಎಸ್. ಯಡಿಯೂರಪ್ಪ ಅವರೇ ಆರು ಜನರನ್ನು ಅಮಾನತು ಮಾಡುವುದರಿಂದ ಪ್ರಯೋಜನ ಆಗುವುದಿಲ್ಲ. ಅದರ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದರು.
ಇದೇ ವೇಳೆ ಬಳ್ಳಾರಿ ಜಿಲ್ಲೆಯ ಮಂತ್ರಿ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು. ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷರ ಪಟ್ಟಾಭಿಷೇಕವನ್ನು ಈಗ ಮಾಡುವ ಅಗತ್ಯತೆ ಇರಲಿಲ್ಲ. ಕರ್ನಾಟಕ ಸತ್ತವರ ಮನೆಯಾಗಿದೆ. ಈ ಸಮಯದಲ್ಲಿ ಪಟ್ಟಾಭಿಷೇಕ ಬೇಕಾಗಿರಲಿಲ್ಲ ಎಂದರು.