ಬಳ್ಳಾರಿ : ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆಯನ್ನ ವಿರೋಧಿಸಿ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯು ಕೈಗೊಂಡಿದ್ದ ಅನಿರ್ದಿಷ್ಟಾವಧಿ ಧರಣಿ ಇಂದು 16 ದಿನಕ್ಕೆ ಕಾಲಿರಿಸಿದೆ. ಕರವೇ (ಪ್ರವೀಣ್ ಶೆಟ್ಟಿ) ಹಾಗೂ ಜಿಲ್ಲಾ ಹಿರಿಯ ನಾಗರಿಕರ ಹಿತರಕ್ಷಣಾ ವೇದಿಕೆ ಮುಖಂಡರು ಬೆಂಬಲ ಸೂಚಿಸಿದ್ದಾರೆ.
ಇಲ್ಲಿನ ಡಿಸಿ ಕಚೇರಿಯ ಎದುರು ಸ್ಥಾಪಿಸಲಾದ ತಾತ್ಕಾಲಿಕ ಟೆಂಟ್ನಲ್ಲಿ ನಾನಾ ಸಂಘಟನೆಗಳ ಮುಖಂಡರೊಂದಿಗೆ ಉಭಯ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡು ಕೆಲಕಾಲ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.
ಅಖಂಡ ಬಳ್ಳಾರಿ ಜಿಲ್ಲೆಯನ್ನ ವಿಭಜನೆ ಮಾಡೋದು ತರವಲ್ಲ. ಭಾಷಾವಾರು ವಿಂಗಡಣೆ ವೇಳೆಯಲ್ಲಿ ಬಳ್ಳಾರಿ ಜಿಲ್ಲೆಯನ್ನ ಅಖಂಡವಾಗಿಯೇ ಉಳಿಸಲಾಗಿತ್ತು. ಹೀಗಾಗಿ, ರಾಜ್ಯ ಸರ್ಕಾರ ಈ ಜಿಲ್ಲೆಯ ವಿಭಜನೆ ಮಾಡೋದು ತರವಲ್ಲ. ಕೂಡಲೇ ನೂತನ ವಿಜಯನಗರ ಜಿಲ್ಲೆ ರಚನೆಯನ್ನ ಕೈಬಿಡಬೇಕೆಂದು ಹಿರಿಯ ಮುಖಂಡ ಟಿ ಜಿ ವಿಠಲ ಆಗ್ರಹಿಸಿದ್ದಾರೆ.
ಕಪ್ಪುಬಟ್ಟೆ ಪ್ರದರ್ಶನ : ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ವಿರೋಧಿ ಹೋರಾಟದಲ್ಲಿ ಕಪ್ಪು ಬಟ್ಟೆಯನ್ನು ಧರಿಸಿಕೊಂಡೇ ಹೋರಾಟಕ್ಕಿಳಿದಿರೋದು ವಿಶೇಷವೆನಿಸಿತು.