ಬಳ್ಳಾರಿ: ರೈಲ್ವೆ ಇಲಾಖೆಯಲ್ಲಿ ಉದ್ಯೋಗಾವಕಾಶ ವಿಫುಲವಾಗಿದ್ದರೂ ಕನ್ನಡಿಗರು ಮಾತ್ರ ರೈಲ್ವೆ ಪರೀಕ್ಷೆ ಎದುರಿಸಲು ಸಿದ್ಧರಿಲ್ಲ ಎಂದು ಕೇಂದ್ರ ರೈಲ್ವೇ ರಾಜ್ಯ ಸಚಿವ ಸುರೇಶ ಅಂಗಡಿ ವಿಷಾದಿಸಿದ್ದಾರೆ.
ಗಣಿನಾಡು ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದ ರೈಲ್ವೆ ನಿಲ್ದಾಣದಲ್ಲಿಂದು ಹೊಸಪೇಟೆ - ಕೊಟ್ಟೂರು, ದಾವಣಗೆರೆ, ಹರಿಹರ ಮಾರ್ಗದ ನೂತನ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿ ಅವರು ಮಾತನಾಡಿ, ನಾನು ಮಂತ್ರಿಯಾದ ಬಳಿಕ ನನ್ನ ಬಳಿ ಬಹಳಷ್ಟು ಮಂದಿ ಯುವ ಜನರು ರೈಲ್ವೇ ಇಲಾಖೆಯಲ್ಲಿ ಉದ್ಯೋಗಾವಕಾಶ ಕಲ್ಪಿಸಿಕೊಡುವಂತೆ ಕೋರಿದ್ದರು. ಆಗ ನಾನು ಆ ಯುವಜನರಿಗೆ ತಿಳಿಸಿ ಹೇಳಿದೆ. ನೇರ ನೇಮಕಾತಿಯ ಪ್ರಕ್ರಿಯೆ ರೈಲ್ವೇ ಇಲಾಖೆಯಲ್ಲಿಲ್ಲ. ರೈಲ್ವೇ ಪರೀಕ್ಷೆಯನ್ನು ಎದುರಿಸಿ ಬಂದವರಿಗೆ ಮಾತ್ರ ಇಲ್ಲಿ ಅವಕಾಶ ಇದೆ ಎಂದು ತಿಳಿಹೇಳಿ ಕಳಿಸಿದೆ ಎಂದರು.
ಗೋವಾ, ಮಹಾರಾಷ್ಟ್ರ, ಬಿಹಾರ, ಓಡಿಶಾ, ಗುಜರಾತ್ ಹಾಗೂ ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ರಾಜ್ಯದ ಯುವಜನರು ನೇರವಾಗಿ ರೈಲ್ವೆ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿ ಉದ್ಯೋಗಕ್ಕೆ ಬರುತ್ತಾರೆ. ಆದರೆ, ನಮ್ಮ ಕರ್ನಾಟಕ ರಾಜ್ಯದ ಯುವಜನರು ಮಾತ್ರ ರೈಲ್ವೆ ಪರೀಕ್ಷೆ ಸಮರ್ಥ ವಾಗಿ ಎದುರಿಸುತ್ತಿಲ್ಲ. ಪದವಿ ಸರ್ಟಿಫಿಕೇಟ್ ಹಿಡಿದುಕೊಂಡು ರಾಜಕಾರಣಿಗಳ ಮನೆ ಬಾಗಿಲಿಗೆ ಬರುವುದನ್ನು ಮೊದ್ಲು ಕರ್ನಾಟಕ ರಾಜ್ಯದ ಯುವಜನರು ಬಿಡಬೇಕು. ನಿಮಗೆ ಉದ್ಯೋಗಾವಕಾಶ ಗಿಟ್ಟಿಸಿಕೊಳ್ಳುವ ಸಾಮರ್ಥ್ಯ ಇದ್ದರೆ ಮಾತ್ರ ರೈಲ್ವೆ ಇಲಾಖೆಯು ಆಯೋಜಿಸುವ ಪರೀಕ್ಷೆ ಸಮರ್ಥವಾಗಿ ನಿಭಾಯಿಸಬೇಕು. ರೈಲ್ವೆ ಇಲಾಖೆಯಲ್ಲಿ ಚಾಕ ಚಕ್ಯತೆಯಿಂದ ಉದ್ಯೋಗ ಪಡೆದುಕೊಳ್ಳಬೇಕು ಎಂದರು.
ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕೊಪ್ಪಳ ಜಿಲ್ಲೆಯ ಮಾಜಿ ಸಚಿವ ಬಸವರಾಜ ರಾಯರೆಡ್ಡಿಯವರು ಬರೀ ಅಡಿಗಲ್ಲು ಹಾಕೋದನ್ನೇ ಮಾಡಿದ್ರು. ಆದರೆ, ಅಗತ್ಯ ಅನುದಾನ ಮೀಸಲಿಡುವ ಕೆಲಸ ಮಾಡಲಿಲ್ಲ . ಅದಕ್ಕೆ ಮತ್ತೆ ಪ್ರಧಾನಿ ನರೇಂದ್ರ ಮೋದಿಯವರೇ ಬರಬೇಕಾಯಿತು ಎಂದರು. ರೈಲ್ವೆ ಇಲಾಖೆಯಲ್ಲಿನ ಸರ್ವಾಂಗೀಣ ಅಭಿವೃದ್ಧಿಗಾಗಿ 50 ಲಕ್ಷ ಕೋಟಿ ರೂ. ಅನುದಾನವನ್ನ ಮೀಸಲಿರಿಸಲಾಗಿದೆ. ಮುಂದಿನ 2022 ರೊಳಗೆ ರೈಲ್ವೆ ಇಲಾಖೆಯ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸುವ ಗುರಿಯನ್ನು ನಮ್ಮ ಸರ್ಕಾರ ಹೊಂದಿದೆ ಎಂದರು.