ಬಳ್ಳಾರಿ: ಬಿಸಿ ನೀರಿನಿಂದ ಸಾಯೋ ಕೊರೊನಾ ರೋಗಕ್ಕೆ ಕೋಟ್ಯಂತರ ರೂ.ಗಳನ್ನ ವ್ಯಯಿಸಿ ಇಷ್ಟೊಂದು ಪ್ರಚಾರ ನೀಡಲಾಗುತ್ತೆ. ನಾನ್ ಬೇಕಾದ್ರೆ ಚಾಲೆಂಜ್ ಮಾಡ್ತೀನಿ. ಕೋವಿಡ್ ಸೋಂಕಿತರೊಂದಿಗೆ ಕಾಲ ಕಳೆದು ಬರುತ್ತೇನೆ. ನನಗೆ ಕೋವಿಡ್ ಸೋಂಕು ಬರುತ್ತಾ ನೋಡ್ತೀನಿ ಎಂದು ಕಮ್ಮರಚೇಡು ಮಠದ ಕಲ್ಯಾಣ ಸ್ವಾಮೀಜಿ ಸವಾಲೆಸೆದಿದ್ದಾರೆ.
ಬಳ್ಳಾರಿ ನಗರದ ಸ್ನೇಹ ಸಂಪುಟದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸೋಂಕಿನ ಭಯದಿಂದ ಸಾಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ರೆ ಜಿಲ್ಲಾಡಳಿತವಾಗಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರವಾಗಲಿ ಕೊರೊನಾ ಸೋಂಕಿನ ಭಯವನ್ನ ಹೋಗಲಾಡಿಸಲು ಯಾವ ಪ್ರಯತ್ನವನ್ನು ನಡೆಸುತ್ತಿಲ್ಲ ಎಂದು ಅವರು ದೂರಿದರು.
ನಾನು ಬೇಕಾದ್ರೆ ಚಾಲೆಂಜ್ ಮಾಡ್ತೀನಿ. ಮಹಾಮಾರಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದವರ ಮೃತದೇಹವನ್ನ ಪರೀಕ್ಷೆಗೆ ಒಳಪಡಿಸಿ. ಅವರು ಸತ್ತಿರುವುದು ಈ ಕೋವಿಡ್ ಸೋಂಕಿನಿಂದ ಅಲ್ಲ. ಬದಲಾಗಿ ಭಯದಿಂದ ಅಥವಾ ಗಂಭೀರ ಸ್ವರೂಪದ ಕಾಯಿಲೆಯಿಂದ ಮಾತ್ರ ಸಾವನ್ನಪ್ಪಿರುವುದು. ನಾನು ಕೂಡ ಕೋವಿಡ್ ಸೋಂಕಿತರೊಂದಿಗೆ ಬೆರೆತು ಬರುವೆ. ನನಗೆ ಟೆಸ್ಟ್ ಮಾಡಿ ನೋಡಿ. ಇದೆಲ್ಲ ಶುದ್ಧ ಸುಳ್ಳು. ಬಿಸಿ ನೀರಿನಿಂದ ಸಾಯೋ ರೋಗಕ್ಕೆ ಸಾವಿರಾರು ಕೋಟಿ ರೂ.ಗಳ ಹಣ ವ್ಯಯಿಸಿ ಜಾಹೀರಾತು ಪ್ರಸಾರ ಮಾಡಿ, ಭಯದ ವಾತಾವರಣವನ್ನ ಸೃಷ್ಟಿಸಲಾಗುತ್ತಿದೆ ಎಂದು ಕಲ್ಯಾಣ ಸ್ವಾಮೀಜಿ ಹೇಳಿದ್ರು.
ಈ ದೇಶದಲ್ಲಿ ದಿನದಿಂದ ದಿನಕ್ಕೆ ಈ ಕೋವಿಡ್ ಸೋಂಕಿನ ಭಯ ಹೆಚ್ಚುತ್ತಿದೆ. ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಮಾನಾಥ ಕೋವಿಂದ್ ಸೇರಿದಂತೆ ಯಾರೊಬ್ಬರೂ ಕೂಡ ಈ ಸೋಂಕಿನಿಂದ ಸಾಯಲ್ಲ ಎಂದು ಧೈರ್ಯವಾಗಿ ಹೇಳೋಕೆ ತಯಾರಿಲ್ಲವೆಂದು ಕಲ್ಯಾಣ ಸ್ವಾಮೀಜಿ ಕುಟುಕಿದ್ರು.
ಮಾಸ್ಕ್ ಧರಿಸಿದ್ರೆ ಸೋಂಕು ಹರಡಲ್ಲ ಎಂಬುವುದು ಸುಳ್ಳು: ಮಾಸ್ಕ್ ಧರಿಸಿದ್ರೆ ಕೋವಿಡ್ ಸೋಂಕು ಹರಡಲ್ಲ ಎಂಬುವುದು ಶುದ್ಧ ಸುಳ್ಳು. ಮಾಸ್ಕ್ ಹಾಕಿದ್ರೆ ಉಸಿರುಗಟ್ಟಿ ಸಾಯುತ್ತಾರೆ. ಗ್ರಾಮೀಣ ಭಾಗಕ್ಕೆ ಒಮ್ಮೆ ಹೋಗಿ ನೋಡಿ. ಅವರು ಯಾರೂ ಕೂಡ ಮಾಸ್ಕ್, ಸ್ಯಾನಿಟೈಸರ್ ಬಳಸಲ್ಲ. ಸಾಮೂಹಿಕವಾಗಿ ಊಟ ಮಾಡ್ತಾರೆ. ಅವರಿಗೆ ಏಕೆ ಕೋವಿಡ್ ಬರಲ್ಲ. ಯಥೇಚ್ಛವಾಗಿ ಈ ಕೋವಿಡ್ ಸೋಂಕು ಹರಡೋ ಸಂದರ್ಭದಲ್ಲಿ ನಾನು ಮಹಾರಾಷ್ಟ್ರದ ಹತ್ತು ಸಾವಿರ ಭಕ್ತರ ಮಧ್ಯೆ ಓಡಾಡಿಕೊಂಡು ಬಂದಿರುವೆ. ಕಲಬುರಗಿಯಲ್ಲೂ ಕೂಡ ಇಂಥದ್ದೇ ವಾತಾವರಣದಲ್ಲಿ ಓಡಾಡಿಕೊಂಡು ಬಂದಿರುವೆ. ಆದ್ರೂ ಕೂಡ ಕೋವಿಡ್ ಸೋಂಕು ನನ್ನ ಹತ್ರ ಸುಳಿದಿಲ್ಲ ಎಂದರು.