ಬಳ್ಳಾರಿ : ಹಾಲಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಬಿಜೆಪಿಯ ಹಿರಿಯ ಮುಖಂಡ ಕೆ.ಎ.ರಾಮಲಿಂಗಪ್ಪ ಅಧಿಕಾರ ಸ್ವೀಕರಿಸಿದ್ದಾರೆ.
ರಾಮಲಿಂಗಪ್ಪ ಅವರು ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಈ ಹಿಂದಿನ ಬುಡಾ ಅಧ್ಯಕ್ಷರಾಗಿದ್ದ ದಮ್ಮೂರು ಶೇಖರ್ ಅವರು, ಮಾಜಿ ಸಚಿವ ಗಾಲಿ ಜನಾರ್ದರೆಡ್ಡಿಯವರ ಪರಮಾಪ್ತರಾಗಿದ್ದರು. ಹೀಗಾಗಿ, ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಚನ್ನಬಸವಗೌಡ ಪಾಟೀಲರು, ದಮ್ಮೂರು ಶೇಖರ್ ಅವರಿಗೆ ಬುಡಾ ಅಧ್ಯಕ್ಷರಾಗಿ ಆಯ್ಕೆ ಮಾಡಿರೋದಕ್ಕೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.
ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಬುಡಾ ಅಧ್ಯಕ್ಷರನ್ನಾಗಿ ನೇಮಿಸಬೇಕೆಂದು ಪ್ರಬಲವಾಗಿ ಪಟ್ಟು ಹಿಡಿದು ಜಿಲ್ಲಾಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಲು ಸಿದ್ಧರಾಗಿದ್ದರು. ಅದಾಗ್ಯೂ ಕೂಡ ದಮ್ಮೂರು ಶೇಖರ್ ಅವರನ್ನ ಬುಡಾ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ದಮ್ಮೂರು ಶೇಖರ್ ಅವರ ಕಾರ್ಯವೈಖರಿಗೆ ಸ್ಥಳೀಯ ಶಾಸಕರ ಅಸಮಾಧಾನವೂ ಕೂಡ ಇತ್ತು.
ಆದರೆ, ಬುಡಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಒಂದೇ ವರ್ಷದಲ್ಲೇ ದಮ್ಮೂರು ಶೇಖರ್ ಅವರು ಅಧಿಕಾರ ಕಳೆದುಕೊಂಡಿರೋದು ಕೂಡ ರೆಡ್ಡಿ ಸಹೋದರರು ಹಾಗೂ ಸಚಿವ ಶ್ರೀರಾಮುಲು ಅವರಿಗೆ ಭಾರೀ ಹಿನ್ನಡೆಯಾಗಿದೆ ಎಂಬ ಚರ್ಚೆಗಳು ಗಣಿ ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇಳಿ ಬಂದಿವೆ.