ಬಳ್ಳಾರಿ: ಪ್ರಧಾನ ಮಂತ್ರಿ ಕಿಸಾನ್ ನಿಧಿ ಯೋಜನೆ ನೋಂದಣಿಗೆ ಜೂನ್ 27 ಕೊನೆಯ ದಿನ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
ಈ ಯೋಜನೆಯಂತೆ ಸಾಗುವಳಿ ಭೂಮಿ ಹೊಂದಿರುವ ಎಲ್ಲ ರೈತರಿಗೆ ವರ್ಷಕ್ಕೆ 6 ಸಾವಿರ ರೂ.ಗಳ ಪ್ರತಿ ನಾಲ್ಕು ತಿಂಗಳಿಗೊಮ್ಮೆಯಂತೆ ಒಟ್ಟು 3 ಸಮಾನ ಕಂತುಗಳನ್ನು ನೀಡಲಾಗುತ್ತಿದೆ. ಈ ಯೋಜನೆಯನ್ನು ಪಡೆದುಕೊಳ್ಳಲು ಜೂನ್ 27 ಕೊನೆಯ ದಿನವಾಗಿರುತ್ತದೆ. ರೈತರು ಕೂಡಲೇ ನೋಂದಾಯಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಮನವಿ ಮಾಡಿದ್ದಾರೆ.
ಈ ಯೋಜನೆಯನ್ನು ಪಡೆಯಲು ಯಾವುದೇ ಸರ್ಕಾರಿ ಸ್ವಾಮ್ಯದ ಕೇಂದ್ರಗಳಾದ ಗ್ರಾ.ಪಂ ಬಾಪುಜಿ ಸೇವಾ ಕೇಂದ್ರಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ, ಹೋಬಳಿಯ ರೈತ ಸಂಪರ್ಕ ಕೇಂದ್ರಗಳು, ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬಹುದು ಎಂದು ಅವರು ವಿವರಿಸಿದ್ದಾರೆ.
ರೈತರು ಸ್ವಯಂ ಘೋಷಿತ ದೃಢಿಕೃತ ಪತ್ರದಲ್ಲಿ ಆಧಾರ್ ಕಾರ್ಡ್, ಪಹಣಿ (ಸರ್ವೆ ನಂ) ಸಂಖ್ಯೆ ಮಾಹಿತಿ, ಬ್ಯಾಂಕ್ ಖಾತೆ ಪಾಸ್‍ಬುಕ್ ಹಾಗೂ ಇತರೆ ದಾಖಲೆಗಳೊಂದಿಗೆ ಜೂ.27ರೊಳಗೆ ಅರ್ಜಿಯನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಆಯಾ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ, ಗ್ರಾಮ ಪಂಚಾಯಿತಿ, ಹೋಬಳಿಯ ನಾಡ ಕಚೇರಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.