ಬಳ್ಳಾರಿ : ಗಣಿನಾಡಿನ ಫ್ಯಾಷನ್ ಉದ್ಯಮವು ಅನ್ಲಾಕ್ 4.0 ಜಾರಿಯಾದ ಬಳಿಕ ತ್ರಿಶಂಕು ಸ್ಥಿತಿಯಲ್ಲಿದೆ. ಅದರಲ್ಲೂ ಈ ಜೀನ್ಸ್ ಘಟಕಕ್ಕೆ ಕಾರ್ಮಿಕರ ಕೊರತೆ ಎದುರಾಗಿದೆ. ಲಾಕ್ಡೌನ್ ಜಾರಿ ಬಳಿಕ ಜೀನ್ಸ್ ಘಟಕಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು, ಸ್ವಯಂ ಉದ್ಯೋಗದತ್ತ ದಾಪುಗಾಲಿಟ್ಟಿದ್ದಾರೆ.
ಜೀನ್ಸ್ ಘಟಕಗಳಲ್ಲಿ ಕಾರ್ಯನಿರ್ವಹಿಸುವ ಬಹುತೇಕ ಕಾರ್ಮಿಕರು ಬಡವರಾಗಿದ್ದು, ಈ ಮುಂಚೆ ಅವರೆಲ್ಲರಿಗೂ ಜೀನ್ಸ್ ಉದ್ಯಮ ಕೈಹಿಡಿದಿತ್ತು. ಆದರೆ, ಲಾಕ್ಡೌನ್ ಆದೇಶ ಹೊರಡಿಸಿದ ಬಳಿಕ ಇಡೀ ಜೀನ್ಸ್ ಉದ್ಯಮವೇ ಬುಡಮೇಲಾಗಿತ್ತು. ಅತೀವ ಆರ್ಥಿಕ ಸಂಕಷ್ಟವನ್ನು ಜೀನ್ಸ್ ಘಟಕಗಳ ಮಾಲೀಕರು ಎದುರಿಸಿದ್ದರು.
ಲಾಕ್ಡೌನ್ ಸಡಿಲಗೊಂಡು ಇಡೀ ಜೀನ್ಸ್ ಉದ್ಯಮ ಚೇತರಿಸಿಕೊಳ್ಳುವ ಹಾದಿಯತ್ತ ಸಾಗುವಾಗಲೇ, ಕಾರ್ಮಿಕರ ಕೊರತೆ ಎದುರಿಸುವಂತಾಗಿದೆ. ಜೀನ್ಸ್ ಘಟಕಗಳ ಮಾಲೀಕರು ಆರ್ಥಿಕ ಮಟ್ಟ ಸುಧಾರಣೆಯಾಗುವ ಆಶಾ ಭಾವನೆ ಹೊಂದಿದ್ದರು. ನಿರೀಕ್ಷಿತ ಪ್ರಮಾಣದಲ್ಲಿ ಆರ್ಥಿಕ ಮಟ್ಟ ಸುಧಾರಣೆಯಾಗುವ ಸಾಧ್ಯತೆ ಕೂಡ ಮಾಲೀಕರಲ್ಲಿ ಹೆಚ್ಚಿತ್ತು. ಆದರೀಗ ಅದೆಲ್ಲಾ ಬುಡಮೇಲಾಗಿದೆ. ಅದಕ್ಕೆ ಪ್ರಮುಖ ಕಾರಣ ಎಂದರೆ ಜೀನ್ಸ್ ಘಟಕಗಳಲ್ಲಿ ಗಣನೀಯ ಪ್ರಮಾಣದಲ್ಲಿ ಕಾರ್ಮಿಕರ ಸಂಖ್ಯೆ ತಗ್ಗಿರುವುದು.
ನೆರೆಯ ಆಂಧ್ರದ ಅನಂತಪುರ, ಕರ್ನೂಲ್ ಜಿಲ್ಲೆಗಳ ಗಡಿಯಂಚಿನ ನಾನಾ ಗ್ರಾಮಗಳಿಂದ ನೂರಾರು ಕಾರ್ಮಿಕರು ಜೀನ್ಸ್ ಘಟಕಗಳಲ್ಲಿ ಕೆಲಸಕ್ಕೆಂದು ಬರುತ್ತಿದ್ದರು. ಲಾಕ್ಡೌನ್ ಜಾರಿ ಬಳಿಕ ಇಡೀ ಜೀನ್ಸ್ ಉದ್ಯಮ ಸಂಪೂರ್ಣ ನೆಲಕಚ್ಚಿತ್ತು. ಅಲ್ಲಿನ ಕಾರ್ಮಿಕರು ಅಕ್ಷರಶಃ ಬೀದಿ ಪಾಲಾಗುವಂತಾಯಿತು. ಹೀಗಾಗಿ ಕಾರ್ಮಿಕರು ಬೇರೆ ಸ್ವಯಂ ಉದ್ಯೋಗದತ್ತ ಮುಖ ಮಾಡಿದ್ದಾರೆ.
ಇದೀಗ ಜೀನ್ಸ್ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದೆಯಾದ್ರೂ, ಕಾರ್ಮಿಕರ ಸಂಖ್ಯೆ ಮಾತ್ರ ಗಣನೀಯ ಪ್ರಮಾಣದಲ್ಲಿ ಕಮ್ಮಿಯಾಗಿದೆ. ಕಾರ್ಮಿಕರು ಆಟೋ ರಿಕ್ಷಾ ಚಾಲನೆ, ತರಕಾರಿ, ಹೂ, ಹಣ್ಣು ಹಾಗೂ ಪೆಟ್ರೋಲ್ ಬಂಕ್ಗಳಲ್ಲಿ ಕಾರ್ಯ ನಿರ್ವಹಿಸಲು ಮುಂದಾಗಿದ್ದಾರೆ. ಕಾರ್ಮಿಕರೇ ಜೀನ್ಸ್ ಉತ್ಪನ್ನಗಳ ತಯಾರಿಕೆಗೆ ಬ್ಯಾಕ್‌ಬೋನ್ ಆಗಿದ್ದು, ಅವರೇ ಇಲ್ಲಾಂದ್ರೆ ಜೀನ್ಸ್ ಘಟಕಗಳ ಮುನ್ನಡೆಸೋದೇ ಕಷ್ಟ.