ಬಳ್ಳಾರಿ: ಮಾಜಿ ಶಾಸಕ ಟಿ.ಹೆಚ್.ಸುರೇಶ್ಬಾಬು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕಂಪ್ಲಿ ಕ್ಷೇತ್ರದಲ್ಲಿ ಇಸ್ಪೀಟ್, ಮಟ್ಕಾ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಕಾಂಗ್ರೆಸ್ ಶಾಸಕ ಜೆ.ಎನ್.ಗಣೇಶ್ ಆರೋಪಿಸಿದ್ದಾರೆ.
ಬಳ್ಳಾರಿಯ ಸರ್ಕಾರಿ ಅತಿಥಿ ಗೃಹದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ಟಿ.ಹೆಚ್. ಸುರೇಶ್ ಬಾಬು ಅಧಿಕಾರ ವರ್ಗವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರು ಕಂಪ್ಲಿ ಕ್ಷೇತ್ರಕ್ಕೆ ಕಾಲಿಟ್ಟರೆ ಸಾಕು. ಇಡೀ ಅಧಿಕಾರ ವರ್ಗವೇ ಅವರ ಹಿಂದಿರಬೇಕೆಂಬ ಕಟ್ಟಪ್ಪಣೆಯೂ ಕೂಡ ಇದೆಯಂತೆ. ಹೀಗಾಗಿ ಅಧಿಕಾರಿಗಳು ಅವರ ಹಿಂದೆ ಇರುತ್ತೆ. ಅಲ್ಲದೇ, ಮಾಜಿ ಶಾಸಕರಿಗೆ ಜಿಲ್ಲಾ ಪೊಲೀಸ್ ಇಲಾಖೆಯು ಎಸ್ಕಾರ್ಟ್ ವ್ಯವಸ್ಥೆ ಮಾಡಲಾಗಿದೆ. ಅದು ಯಾವ ಪುರುಷಾರ್ಥಕ್ಕೆ ಮಾಡಿದ್ದಾರಂತ ಎಸ್ಪಿಯವ್ರೇ ಸ್ಪಷ್ಟಪಡಿಸಬೇಕೆಂದು ಶಾಸಕ ಗಣೇಶ ಆಗ್ರಹಿಸಿದ್ದಾರೆ.
ಕುರುಗೋಡು ತಾಲೂಕಿನ ನಾನಾ ಕಡೆಗಳಲ್ಲಿ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಿಕೊಂಡು ಇಸ್ಪೀಟ್, ಮಟ್ಕಾ ಎಗ್ಗಿಲ್ಲದೇ ಸಾಗುತ್ತಿದೆ. ದಮ್ಮೂರು ಗ್ರಾಮದ ಬಳಿ ಇಸ್ಪೀಟ್ ಜೂಜಾಟದ ಅಡ್ಡೆಗೆ ಖುದ್ದು ನಾನೇ ಭೇಟಿ ನೀಡಿದ್ದೆ. 150ಕ್ಕೂ ಹೆಚ್ಚು ಮಂದಿ ಶೆಡ್ ಹಾಕಿಕೊಂಡು ಇಸ್ಪೀಟ್, ಜೂಜಾಟದಲ್ಲಿ ತೊಡಗಿದ್ದಾರೆ. ಇದರ ಜತೆ ಜತೆಗೆ ಅಕ್ರಮವಾಗಿ ಮದ್ಯ, ಗಾಂಜಾ ಮಾರಾಟವು ನಡೆಯುತ್ತಿದೆ. ಈ ಮಾಹಿತಿ ಸಿಕ್ಕ ಬಳಿಕ ನಾನೇ ದಾಳಿ ನಡೆಸಿ ಎಸ್‌ಪಿ ಸಿ.ಕೆ. ಬಾಬಾ ಅವರಿಗೆ ಮಾಹಿತಿ ನೀಡಿದ್ದೇನೆ. ಆದ್ರೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದ್ರು.