ಬಳ್ಳಾರಿ: ಇನ್ಮುಂದೆ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕೇಂದ್ರದ ಆವರಣದಲ್ಲೇ ‘ಕೈತೋಟ ಮನೆ’ ಶುರುವಾಗಲಿದೆ. ಅಂದಾಜು 350ಕ್ಕೂ ಅಧಿಕ ಸರ್ಕಾರಿ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕಾಂಶವುಳ್ಳ ಬೆಳೆ ಬೆಳೆಯಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ಸರ್ಕಾರಿ ಮತ್ತು ಅಂಗನವಾಡಿ ಕೇಂದ್ರಗಳಲ್ಲಿನ ಮಕ್ಕಳು ಪೌಷ್ಠಿಕಾಂಶದ ಕೊರತೆಯಿಂದ ಅನಾರೋಗ್ಯಕ್ಕೆ ತುತ್ತಾಗ ಬಾರದೆಂಬ ಉದ್ದೇಶದೊಂದಿಗೆ ‘ಕೈತೋಟ ಮನೆ’ ನಿರ್ಮಾಣಕ್ಕೆ ಆದ್ಯತೆ ನೀಡಲು ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯು ನಿರ್ಧರಿಸಿದೆ. ಗಣಿಜಿಲ್ಲೆಯ ಹೂವಿನಹಡಗಲಿ ತಾಲೂಕಿನ ನಂದಿಹಳ್ಳಿ ಆಶ್ರಮ ಸರ್ಕಾರಿ ಶಾಲೆಯೊಂದನ್ನು ಫೈಲೆಟ್ ಪ್ರಾಜೆಕ್ಟ್ ಆಗಿ ಆಯ್ಕೆ ಮಾಡಲಾಗಿದೆ. ಜಿಲ್ಲಾ ಪಂಚಾಯತ್‌ನ ನರೇಗಾ ಯೋಜನೆ ಅಡಿಯಲ್ಲಿ ‘ಕೈತೋಟ ಮನೆ’ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.
ಶಾಲೆಯ ಆವರಣದಲ್ಲೇ ಬೆಳೆಯುವ ತರಕಾರಿಯನ್ನು ಬಿಸಿಯೂಟದ ಅಡುಗೆಗೆ ಬಳಸಲಾಗುತ್ತದೆ. ಆ ಮೂಲಕ ಮಕ್ಕಳ ಆರೋಗ್ಯ ಕಾಪಾಡುವಂತಹ ಸದುದ್ದೇಶವಿದೆ. ಇದರ ಅನುಷ್ಠಾನವನ್ನು ತೋಟಗಾರಿಕಾ ಇಲಾಖೆಯಿಂದ ಮಾಡಲಾಗುತ್ತಿದೆ. ನಂತರದಲ್ಲಿ ಶಾಲೆ ಶಿಕ್ಷಕರು ಇದರ ನಿರ್ವಹಣೆಯ ಜವಾಬ್ದಾರಿ ವಹಿಸಬೇಕಾಗಿದೆ. ಪೌಷ್ಠಿಕಾಂಶವುಳ್ಳ ತೋಟಗಾರಿಕೆ ಬೆಳೆಯನ್ನು ಅನುಷ್ಠಾನ ಗೊಳಿಸುವ ಸಲುವಾಗಿಯೇ ಈಗಾಗಲೇ ಜಿಲ್ಲೆಯಾದ್ಯಂತ ಅಂದಾಜು 350 ಶಾಲೆ, ಅಂಗನವಾಡಿ ಕೇಂದ್ರಗಳನ್ನು ಗುರುತಿಸಲಾಗಿದೆ. ನೀರು ಮತ್ತು ಕಾಂಪೌಂಡ್ ವ್ಯವಸ್ಥೆ ಇರುವ ಕಡೆಗಳಲ್ಲಿ ತೋಟಗಾರಿಕೆ ಮಾಡಲಾಗುತ್ತಿದೆ.
ಈ ಪೌಷ್ಠಿಕಾಂಶದ ತೋಟದಲ್ಲಿ ತೆಂಗು, ಕರಿಬೇವು, ಲಿಂಬೆ, ನುಗ್ಗೆ, ಪಪ್ಪಾಯಿ, ಅಂಜೂರ, ಪೇರಲ, ಟೊಮ್ಯಾಟೊ ಗಿಡಗಳನ್ನ ಬೆಳೆಸಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ರಾಮಪ್ಪ ತಿಳಿಸಿದ್ದಾರೆ. ನರೇಗಾ ಯೋಜನೆ ಅಡಿ ಸಸಿಗಳನ್ನು ಹಾಕಲು ಸರ್ಕಾರಿ ಶಾಲೆಯೊಂದಕ್ಕೆ 7,661 ರೂ.ಗಳನ್ನ ವ್ಯಯಿಸಲಾಗುತ್ತಿದೆ. ಈಗಾಗಲೇ ನಂದಿಹಳ್ಳಿ ಆಶ್ರಮ ಶಾಲೆ ಆವರಣದಲ್ಲಿ ಅನುಷ್ಠಾನ ಮಾಡಲಾಗಿದೆ ಎಂದಿದ್ದಾರೆ.