ಬಳ್ಳಾರಿ: ರಾಜ್ಯದ ಬಳ್ಳಾರಿ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಕಬ್ಬಿಣದ ಅದಿರು ಉತ್ಪಾದನೆಗೆ ವಿಧಿಸಿದ್ದ ಮಿತಿಯಲ್ಲಿ ಸುಪ್ರೀಂಕೋರ್ಟ್ ಒಂದಿಷ್ಟು ರಿಯಾಯಿತಿ ನೀಡಿದೆ. ಕಬ್ಬಿಣ ಉತ್ಪಾದನೆ ಹೆಚ್ಚಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ ಷೇರುಪೇಟೆಯಲ್ಲಿ ಲೋಹ ವಲಯದ ಷೇರುಗಳ ಮೌಲ್ಯ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಹೂಡಿದಾರರ ಗಮನ ಸೆಳೆದಿವೆ.
ಅಕ್ರಮ ಗಣಿಗಾರಿಕೆ ಆರೋಪದ ತನಿಖೆ ನಡೆಸಲು ಸಿಬಿಐಗೆ ವಹಿಸುವ ಮೂಲಕ ಸರ್ವೋಚ್ಚ ನ್ಯಾಯಾಲಯದ ಕೆಂಗಣ್ಣಿಗೆ ರಾಜ್ಯದ ಗಣಿಗಾರಿಕೆ ಗುರಿಯಾಗಿತ್ತು. ಕೇಂದ್ರ ಉನ್ನತಾಧಿಕಾರ ಸಮಿತಿ ವರದಿ (ಸಿಇಸಿ) ಆಧರಿಸಿ ಸುಪ್ರೀಂಕೋರ್ಟ್ ಗಣಿಗಾರಿಕೆಯ ಮೇಲೆ ಹಲವು ನಿಬಂಧನೆ ವಿಧಿಸಿ, ಗಣಿಗಾರಿಕೆಗೆ ಮೂಗುದಾರ ಹಾಕಿತ್ತು.
ಅಕ್ರಮ ಗಣಿಗಾರಿಕೆಯಿಂದ ಪರಿಸರ ಹಾನಿ ಜೊತೆಗೆ ನೈಸರ್ಗಿಕ ಸಂಪತ್ತು ಲೂಟಿಯಾಗುತ್ತದೆ, ಗಣಿಗಾರಿಕೆಯಲ್ಲಿ ನಿಯಮಗಳು ಪಾಲನೆಯಾಗಿಲ್ಲ ಎಂಬ ಆರೋಪ ಹಿನ್ನಲೆಯಲ್ಲಿ ಅದಿರು ಉತ್ಪಾದನೆಗೆ ಮಿತಿ ನಿಗದಿ, ಅದಿರು ರಫ್ತಿಗೆ ನಿರ್ಬಂಧ, ಅದಿರನ್ನು ಮಾನಿಟರಿಂಗ್ ಕಮಿಟಿ ಮೂಲಕವೇ ಇ- ಹರಾಜು ಮಾಡಿ ಮಾರಾಟ ಮಾಡಬೇಕು, ಸಿ ಕೆಟಗೆರಿ ಗಣಿ ಗುತ್ತಿಗೆಗಳನ್ನು ಮಾಲೀಕರಿಂದ ಪಡೆದು ಇ-ಹರಾಜು ಮೂಲಕ ಗುತ್ತಿಗೆ ನೀಡಬೇಕೆಂದು ಸೂಚಿಸಿತ್ತು.
ಇದನ್ನೂ ಓದಿ: ಕರ್ನಾಟಕದ ಮೂರು ಜಿಲ್ಲೆಗಳ ಕಬ್ಬಿಣದ ಅದಿರು ಸಾಗಿಸಲು 'ಸುಪ್ರೀಂ' ಗ್ರೀನ್ ಸಿಗ್ನಲ್
ಅಕ್ರಮ ಗಣಿಗಾರಿಕೆ ಕುರಿತಾ ಲೋಕಾಯುಕ್ತದ ಎರಡು ವರದಿಗಳು, ಸಿಬಿಐ, ಎಸ್ಐಟಿ ಸಂಸ್ಥೆಗಳ ತನಿಖೆ ನಡೆದು, ಹಲವು ಆರೋಪಿಗಳ ಬಂಧನ ಸೇರಿದಂತೆ ಗಣಿಗಾರಿಕೆಯ ಮೇಲೆ ತೀವ್ರ ನಿಗಾವಹಿಸಿತ್ತು. ಸುಮಾರು ಒಂದು ದಶಕದ ನಂತರದಲ್ಲಿ ಸುಪ್ರೀಂಕೋರ್ಟ್ ಗಣಿಗಾರಿಕೆಯ ಮೇಲಿನ ಕೆಲ ನಿರ್ಬಂಧ ಸಡಿಲುಗೊಳಿಸುವ ಮೂಲಕ ಅಕ್ರಮ ನಡೆಯದಂತೆ ಕಟ್ಟೆಚ್ಚರ ವಹಿಸುತ್ತಿದೆ.
ಕಳೆದ ಮೇ ತಿಂಗಳಲ್ಲಿ ಕಬ್ಬಿಣದ ಅದಿರು ರಫ್ತು ಮೇಲಿನ ನಿರ್ಬಂಧ ಜೊತೆಗೆ ಗಣಿ ಮಾಲೀಕರು ನೇರವಾಗಿ ಅದಿರು ಮಾರಾಟಕ್ಕೆ ವಿಧಿಸಿರುವ ನಿರ್ಬಂಧ ತೆರವುಗೊಳಿಸಲಾಗಿತ್ತು. ಇದೀಗ ಅದಿರು ಉತ್ಪಾದನೆಗೆ ವಿಧಿಸಿರುವ ಮಿತಿಯನ್ನು ಹೆಚ್ಚಿಸಿದೆ. ಹೀಗೆ ಗಣಿಗಾರಿಕೆ ಮೇಲೆ ಹಾಕಿರುವ ಮೂಗುದಾರವನ್ನು ಸುಪ್ರೀಂ ಕೋರ್ಟ್ ಸಡಿಲಗೊಳಿಸಿದೆ.
ಇಷ್ಟು ದಿನಗಳ ಕಾಲ ಮಂಕಾಗಿದ್ದ ಗಣಿಗಾರಿಕಾ ವಲಯ ಚೇತರಿಸಿಕೊಳ್ಳುತ್ತಿದೆ. ಆರ್ಥಿಕ ಅಭಿವೃದ್ಧಿಯ ಜೊತೆಗೆ ಪರಿಸರ ಸಂರಕ್ಷಣೆಗೂ ಹೆಚ್ಚಿನ ನಿಗಾ ವಹಿಸಬೇಕೆಂದು ಆದೇಶದಲ್ಲಿ ಸೂಚಿಸುವ ಮೂಲಕ ಗಣಿ ಗುತ್ತಿಗೆದಾರರಿಗೂ ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಕಬ್ಬಿಣದ ಅದಿರು ರಫ್ತು ರದ್ದು ನೀತಿ ಮುಂದುವರಿಸಲು ಸಚಿವ ಸಂಪುಟ ನಿರ್ಧಾರ
ಅದಿರು ಉತ್ಪಾದನೆಯ ಜೊತೆಗೆ ಪರಿಸರ ಮತ್ತು ಆರ್ಥಿಕ ಅಭಿವೃದ್ಧಿಯು ಜೊತೆ ಜೊತೆಗೆ ನಡೆಯಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಈ ಮೂರೂ ಜಿಲ್ಲೆಗಳಲ್ಲಿ ಉತ್ಪಾದನೆಯಾಗುವ ಕಬ್ಬಿಣದ ಅದಿರು ರಫ್ತು ಮಾಡಲು ಇದ್ದ ನಿರ್ಬಂಧವನ್ನು ಕಳೆದ ಮೇ ತಿಂಗಳಲ್ಲಿ ಸುಪ್ರೀಂಕೋರ್ಟ್ ತೆರವು ಮಾಡಿತ್ತು. ಇ-ಹರಾಜಿನ ಬದಲು ನೇರ ಮಾರಾಟದ ಮೂಲಕ ಅದಿರು ಮಾರಾಟಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಕರ್ನಾಟಕದ ಬಳ್ಳಾರಿ, ತುಮಕೂರು ಮತ್ತು ಚಿತ್ರದುರ್ಗಗಳಲ್ಲಿ ಕಬ್ಬಿಣದ ಅದಿರು ಉತ್ಪಾದನೆ ಮತ್ತು ರಫ್ತಿಗೆ ಸುಪ್ರೀಂಕೋರ್ಟ್ 2011ರಲ್ಲಿ ನಿರ್ಬಂಧ ವಿಧಿಸಿತ್ತು. ಈ ಹಿಂದೆ ಬಳ್ಳಾರಿ ಜಿಲ್ಲೆಯಲ್ಲಿ ವರ್ಷಕ್ಕೆ 2.8 ಕೋಟಿ ಮೆಟ್ರಿಕ್ ಟನ್ ಕಬ್ಬಿಣದ ಅದಿರು ಉತ್ಪಾದನೆಗೆ ಅವಕಾಶವಿತ್ತು. ಸುಪ್ರೀಂ ಕೋರ್ಟ್ ಈಗ ಉತ್ಪಾದನೆಯ ಮಿತಿಯನ್ನು ವಾರ್ಷಿಕ 3.5 ಕೋಟಿ ಮೆಟ್ರಿಕ್ ಟನ್‌ಗೆ ಏರಿಸಲು ಅನುಮತಿ ನೀಡಿದೆ. ಅದೇ ರೀತಿ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ವಾರ್ಷಿಕವಾಗಿ 70 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಗೆ ವಿಧಿಸಿದ್ದ ಮಿತಿಯನ್ನು 1.5 ಕೋಟಿ ಮೆಟ್ರಿಕ್ ಟನ್‌ಗೆ ಏರಿಕೆಯಾಗಿರುವುದು ಗಣಿಗಾರಿಕೆ ವಲಯದಲ್ಲಿ ಸಂಚಲನ ಮೂಡಿಸಿದೆ.
ಇದನ್ನೂ ಓದಿ: ಗರಸು ಹೇರುವ ನೆಪದಲ್ಲಿ ಜಿಂದಾಲ್ ಕಂಪನಿಗೆ ಕಪ್ಪತ್ತಗುಡ್ಡದ ಅದಿರು ಸಾಗಣೆ?