ಬಳ್ಳಾರಿ: ಜೆಎಸ್‌ಡಬ್ಲ್ಯೂ ಸಮೂಹವು ಬಳ್ಳಾರಿಯ ತೋರಣಗಲ್ಲಿನಲ್ಲಿ 1000 ಹಾಸಿಗೆಗಳ ಆಮ್ಲಜನಕಯುಕ್ತ ಕೋವಿಡ್ ಕೇರ್ ಫೀಲ್ಡ್ ಆಸ್ಪತ್ರೆಯನ್ನು ಪ್ರಾರಂಭಿಸಿದೆ. ಈ ಆಸ್ಪತ್ರೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆನ್ಲೈನ್ (ವರ್ಚುವಲ್) ಮೂಲಕ ಉದ್ಘಾಟಿಸಿದರು.
ಈ ಬೃಹತ್ ಆಸ್ಪತ್ರೆಯು ಭಾರತದ ಅತಿದೊಡ್ಡ ಕೋವಿಡ್ ಕೇರ್ ಸೌಲಭ್ಯಗಳಲ್ಲಿ ಒಂದಾಗಿದ್ದು, ಸೊಂಕಿತರಿಗೆ ನಿರಂತರವಾಗಿ ಆಮ್ಲಜನಕವನ್ನು ಪೂರೈಸಲು ಜೆ.ಎಸ್.ಡಬ್ಲ್ಯೂ. ಉಕ್ಕಿನ ಸ್ಥಾವರದಿಂದ 4.8 ಕಿ.ಮೀ. ಪೈಪ್ಲೈನ್ ವ್ಯವಸ್ಥೆ ಮಾಡಲಾಗಿದೆ. ಈ ಮೂಲ ಸೌಕರ್ಯವನ್ನು 15 ದಿನಗಳ ದಾಖಲೆಯ ಅವಧಿಯಲ್ಲಿ ನಿರ್ಮಿಸಲಾಗಿದೆ. ಜೆಎಸ್‌ಡಬ್ಲ್ಯೂ ಸಮೂಹವು ಬಳ್ಳಾರಿ ಜಿಲ್ಲಾಡಳಿತದ ಸಹಯೋಗದೊಂದಿಗೆ ಈ ಬೃಹತ್ ವೈದ್ಯಕೀಯ ಸೌಲಭ್ಯ ರಚಿಸಿ ಭಾರತೀಯರಿಗೆ ಸಮರ್ಪಿಸಿದೆ. ಈ ಕೋವಿಡ್ ಆಸ್ಪತ್ರೆಯನ್ನು ಬಳ್ಳಾರಿ ಜಿಲ್ಲಾಡಳಿತ ನಿರ್ವಹಿಸಲಿದೆ.
ಹೊಸದಾಗಿ ನಿರ್ಮಿಸಿದ ವೈದ್ಯಕೀಯ ಸೌಲಭ್ಯದ ಬಗ್ಗೆ ಪ್ರತಿಕ್ರಿಯಿಸಿದ ಜೆಎಸ್‌ಡಬ್ಲ್ಯೂ ಫೌಂಡೇಶನ್ನ ಅಧ್ಯಕ್ಷೆ ಶ್ರೀಮತಿ ಸಂಗೀತಾ ಜಿಂದಾಲ್, ಪ್ರಸ್ತುತವಾಗಿ ಭಾರತವು ಕೋವಿಡ್ನ ಎರಡನೇ ಅಲೆಯಿಂದ ತೀವ್ರ ಸಂಕಷ್ಟ ಎದುರಿಸುತ್ತಿದೆ. ಇದು ದೇಶದ ಜನರ ಆರೋಗ್ಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಹಿಂದೆಂದು ಕಾಣದಂತೆ ಕೊರೊನಾ ಸೊಂಕಿತರ ಸಂಖ್ಯೆ ಹಾಗೂ ಸಾವು-ನೋವುಗಳು ಹೆಚ್ಚಾಗುತ್ತಿದೆ ಎಂದರು.
ದೇಶದ ದೀರ್ಘಕಾಲದ ವೈದ್ಯಕೀಯ ಸೌಲಭ್ಯಗಳ ಕೊರತೆ, ಆಸ್ಪತ್ರೆಯಲ್ಲಿ ಹೆಚ್ಚಿನ ಹಾಸಿಗೆಯ (ಬೆಡ್) ಬೇಡಿಕೆ ಮತ್ತು ತೀವ್ರವಾದ ಆಮ್ಲಜನಕದ ಕೊರತೆಯನ್ನು ಮನಗೊಂಡು ಜೆಎಸ್‌ಡಬ್ಲ್ಯೂ ಸಮೂಹವು ತಕ್ಷಣವೇ ಈ ಕೊರತೆಗಳನ್ನು ನೀಗಿಸಲು ಬೃಹತ್ ಕೋವಿಡ್ ಕೇರ್ ಆಸ್ಪತ್ರೆ ನಿರ್ಮಿಸಿದೆ ಎಂದರು.
ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿನ ತೋರಣಗಲ್ಲಿನಲ್ಲಿರುವ ಭಾರತದ ಅತಿದೊಡ್ಡ ಉಕ್ಕು ಉತ್ಪಾದನಾ ಕೇಂದ್ರವಾದ ಜೆಎಸ್‌ಡಬ್ಲ್ಯೂ ಸ್ಟೀಲ್ 1000 ಹಾಸಿಗೆಗಳ ಬೃಹತ್ ಆಮ್ಲಜನಕಯುಕ್ತ ಕೋವಿಡ್ ಕೇರ್ ಫೀಲ್ಡ್ ಆಸ್ಪತ್ರೆಯನ್ನು ನಿರ್ಮಿಸಿದೆ. ಈ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡುವುದು ಮತ್ತು ಕೋವಿಡ್ ಪ್ರಕರಣಗಳನ್ನು ಕಡಿಮೆ ಮಾಡುವ ಸರ್ಕಾರದ ಪ್ರಯತ್ನಗಳಿಗೆ ಸಂಸ್ಥೆ ಬೆಂಬಲಿಸುತ್ತದೆ ಎಂದರು ಹೇಳಿದರು.
ಜೆಎಸ್‌ಡಬ್ಲ್ಯೂ ಸಮೂಹದ ಅಧ್ಯಕ್ಷ ಸಜ್ಜನ್ ಜಿಂದಾಲ್, ಮುಖ್ಯಮಂತ್ರಿ, ಕರ್ನಾಟಕದ ಹಿರಿಯ ಮಂತ್ರಿಗಳು, ರಾಜ್ಯ ಮತ್ತು ಜಿಲ್ಲಾಡಳಿತದ ಸದಸ್ಯರ ಬೆಂಬಲವನ್ನು ಅಂಗೀಕರಿಸಿದರು. ವೈದ್ಯರು, ದಾದಿಯರು ಮತ್ತು ಕೋವಿಡ್ ಯೋಧರಿಗೆ ಕೃತಜ್ಞತೆ ಸಲ್ಲಿಸಿದರು. ಮಾನವ ಉಳಿವಿನ ಈ ಆತಂಕಕಾರಿ ಮತ್ತು ನಿರ್ಣಾಯಕ ಹಂತದಲ್ಲಿ ಜೆಎಸ್‌ಡಬ್ಲ್ಯೂ ಮಾನವಕುಲದ ಸೇವೆಗಾಗಿ ತನ್ನ ಸಾಮರ್ಥ್ಯದಲ್ಲಿ ಎಲ್ಲವನ್ನೂ ಮಾಡಲು ಬಯಸುತ್ತದೆ. ಪ್ಲಾಂಟ್‌ನಿಂದ ರೋಗಿಗೆ ನೇರ ಆಮ್ಲಜನಕದ ಪೂರೈಕೆ ಮಾಡಲು ಆಸ್ಪತ್ರೆಯನ್ನು ನಿರ್ಮಿಸಿದ್ದೇವೆ ಎಂದು ಸಜ್ಜನ್ ಜಿಂದಾಲ್ ಹೇಳಿದರು.
ನೇರ ಆಮ್ಲಜನಕ ಪೂರೈಕೆ...
ಜೆಎಸ್‌ಡಬ್ಲ್ಯೂ ಸ್ಟೀಲ್ ಲಿಮಿಟೆಡ್ನ ಉಪ ವ್ಯವಸ್ಥಾಪಕ ನಿರ್ದೇಶಕ ಡಾ. ವಿನೋದ್ ನೋವಲ್ ಪ್ರಕಾರ, ರೋಗಿಗಳಿಗೆ ನೇರ ಆಮ್ಲಜನಕ ಪೂರೈಕೆಯನ್ನು ಒದಗಿಸುವ ವಿಶಿಷ್ಟ ಕಲ್ಪನೆಯು ಜೆಎಸ್‌ಡಬ್ಲ್ಯೂ ಸಮೂಹದ ಅಧ್ಯಕ್ಷ ಸಜ್ಜನ್ ಜಿಂದಾಲ್ ಅವರದ್ದಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಆಮ್ಲಜನಕವನ್ನು ರೋಗಿಗಳ ಹತ್ತಿರ ಕೊಂಡೊಯ್ಯಲು ಸಾಧ್ಯವಾಗದಿದ್ದರೆ ನಾವು ಹೊಸ ಮಾರ್ಗಗಳನ್ನು ಕಂಡುಕೊಳ್ಳಬೇಕು ಮತ್ತು ರೋಗಿಗಳನ್ನು ಆಮ್ಲಜನಕವಿರುವ ಕಡೆ ಕರೆತರುವ ಕೆಲಸ ಮಾಡಬೇಕಾಗಿತ್ತು ಎಂದು ಹೇಳಿದರು.
ಉತ್ತರ ಕರ್ನಾಟಕ ಮತ್ತು ಆಂಧ್ರ ಪ್ರದೇಶರ ಸೋಂಕಿತರಿಗೆ ಚಿಕಿತ್ಸೆ...
ಈ ಬೃಹತ್ ಕೋವಿಡ್ ಚಿಕಿತ್ಸಾ ಕೇಂದ್ರವು ಚಿಕಿತ್ಸೆಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದೆ. ಈ ಆಸ್ಪತ್ರೆಯಿಂದ ಉತ್ತರ ಕರ್ನಾಟಕ ಹಾಗೂ ನೆರೆಯ ಆಂಧ್ರ ಪ್ರದೇಶದ ಜಿಲ್ಲೆಗಳ ಸೋಂಕಿತರ ಚಿಕಿತ್ಸೆಗೂ ಅನುಕೂಲವಾಗಲಿದೆ.
700 ಜನ ಸಿಬ್ಬಂದಿ ವರ್ಗ...
ಈ ಬೃಹತ್ ಕೋವಿಡ್ ಕೇರ್ ಆಸ್ಪತ್ರೆಯು ಕ್ರಿಟಿಕಲ್ ಉಪಕರಣಗಳು, ಔಷಧಾಲಯ, ಅಡುಗೆ ಕೋಣೆ ಹಾಗೂ ಲಾಂಡ್ರಿಯಂತಹ ಸೌಕರ್ಯಗಳನ್ನು ಹೊಂದಿದೆ. ವೈದ್ಯರು/ತಜ್ಞರು, ನರ್ಸ್, ಅರೆವೈದ್ಯರು, ಮೇಲ್ವಿಚಾರಕರು ಮತ್ತು ವೈದ್ಯಕೀಯೇತರ ಸಿಬ್ಬಂದಿಯನ್ನು ಈ ಆಸ್ಪತ್ರೆ ಒಳಗೊಂಡಿದೆ. ಮೂರು ಪಾಳಿಯಲ್ಲಿ 700 ಜನರ ಸಹಾಯದಿಂದ ಜಿಲ್ಲಾಡಳಿತವು ಈ ಆಸ್ಪತ್ರೆಯನ್ನು ನಿರ್ವಹಿಸಲಿದೆ.
ಅಗತ್ಯ ಮೂಲಭೂತ ಸೌಲಭ್ಯಗಳು...
ತಡೆರಹಿತ ಆಮ್ಲಜನಕ ಪೂರೈಸಲು ಜೆಎಸ್‌ಡಬ್ಲ್ಯೂ ಸ್ಟೀಲ್ ವಿಜಯನಗರ ವರ್ಕ್ಸ್ ಸ್ಥಾವರವೂ 1200 Nm3/hr ಆಮ್ಲಜನಕವನ್ನು ಈ ಆಸ್ಪತ್ರೆಗೆ ಪೂರೈಸುತ್ತದೆ. ಈ ಆಸ್ಪತ್ರೆಯನ್ನು 850 ಟನ್ಗಳ ಎಸಿ (ಹವಾನಿಯಂತ್ರಣ)ಯ ಮೂಲಕ ತಂಪಾಗಿರಿಸಲಾಗುವುದು.
ಹೆಚ್ಚುವರಿಯಾಗಿ, ಆಸ್ಪತ್ರೆಯೊಳಗೆ ಸೂಕ್ತ ತಾಪಮಾನ, ಆಸ್ಪತ್ರೆಯಲ್ಲಿ ಗಾಳಿಯ ಗುಣಮಟ್ಟ ಕಾಪಾಡಲು ಮತ್ತು ವಾಯು ಶುದ್ಧೀಕರಣಕ್ಕಾಗಿ ಯಂತ್ರವನ್ನು ಅಳವಡಿಸಲಾಗಿದೆ. ಸೋಂಕಿತರ ತಡೆರಹಿತ ಆರೈಕೆಗಾಗಿ ಅಗತ್ಯವಿರುವ ಎಲ್ಲ ವಿದ್ಯುತ್ ಮತ್ತು ನೀರು ಸರಬರಾಜು ವ್ಯವಸ್ಥೆಯನ್ನು ಮಾಡಲಾಗಿದೆ.