ಬಳ್ಳಾರಿ: ದಿವಂಗತ ಲಕ್ಷ್ಮೀನಾರಾಯಣರೆಡ್ಡಿಯವರ ಅಧಿಕಾರದ ಅವಧಿಯಲ್ಲಾದ ನೇಮಕಾತಿ ಪ್ರಕ್ರಿಯೆಗೆ ನಾನೇನು ಕಮೆಂಟ್ ಮಾಡೋಕೆ ಹೋಗಲ್ಲ ಎಂದು ವಿಮ್ಸ್ನ ಹಾಲಿ ನಿರ್ದೇಶಕ ಡಾ. ಟಿ.ಗಂಗಾಧರಗೌಡ ಅಭಿಪ್ರಾಯಪಟ್ಟಿದ್ದಾರೆ.
ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಅಂದಾಜು 68 ಮಂದಿಯನ್ನು ಹೊಸದಾಗಿ ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಅಂಥಹದ್ದೇನು ಅಕ್ರಮ ನಡೆದಿಲ್ಲ. ಆದರೆ ನಿಗದಿತ ಹುದ್ದೆಗಳಿಗಿಂತಲೂ ಹೆಚ್ಚುವರಿಯಾಗಿ ನೇಮಕಾತಿ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ. ಅಂದಾಜು 150 ಮಂದಿಯನ್ನು ಹಿಂದಿನ ನಿರ್ದೇಶಕರಾಗಿದ್ದ ದಿವಂಗತ ಎಲ್.ಎನ್.ರೆಡ್ಡಿಯವರು ನೇಮಕಾತಿ ಮಾಡಿಕೊಂಡಿದ್ದಾರೆ ಎಂದು ಹಾಲಿ ನಿರ್ದೇಶಕ ಡಾ. ಗಂಗಾಧರಗೌಡ ಈಟಿವಿ ಭಾರತ್ಗೆ ತಿಳಿಸಿದ್ದಾರೆ.
ಆದರೆ ಆಗ ಅಷ್ಟೊಂದು ಹುದ್ದೆಗಳ ನೇಮಕಾತಿ ಅಗತ್ಯ ಇತ್ತು. ಯಾಕಂದ್ರೆ 517 ಬೆಡ್ಗಳಿಂದ 1017 ಬೆಡ್ಗಳಿಗೆ ವಿಮ್ಸ್ ಆಸ್ಪತ್ರೆ ವಿಸ್ತಾರಗೊಂಡಿದೆ. ಹೀಗಾಗಿ 150 ಮಂದಿ ನೇಮಕಾತಿ ಪ್ರಕ್ರಿಯೆ ಏನೂ ನಮಗೆ ಹೊರೆಯಾಗಿಲ್ಲ. ಆದರೆ ಅವರನ್ನು ಮುಂದುವರಿಸೋದು ಅಥವಾ ಕೈಬಿಡೋದು ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಚಾರ. ಆದರೆ ಈ ನೇಮಕಾತಿ ಪ್ರಕ್ರಿಯೆಯಲ್ಲಿ ನೇಮಕಗೊಂಡವರನ್ನು ಆಯಾ ಹುದ್ದೆಗಳಲ್ಲಿ ಮುಂದಿನ ಆರು ತಿಂಗಳ ಅವಧಿಗೆ ವಿಸ್ತರಿಸಲಾಗಿದೆ. ರಾಜ್ಯ ಸರ್ಕಾರದ ಮುಂದಿನ ಆದೇಶದ ಮೇರೆಗೆ ಅವರನ್ನು ಹುದ್ದೆಯಲ್ಲಿ ಮುಂದುವರಿಸಲಾಗುವುದು ಎಂದರು.
ಇದನ್ನೂ ಓದಿ: ಸರಳವಾಗಿ ನಡೆದ ಶ್ರೀ ಮಹಾದೇವ ತಾತರ 33ನೇ ಪುಣ್ಯಸ್ಮರಣೆಯ ಜಾತ್ರೆ
ಕೋವಿಡ್ ಸಂದರ್ಭದಲ್ಲೂ ಕೂಡ ಈ ಹುದ್ದೆಗಳ ಅನಿವಾರ್ಯತೆ ಇತ್ತು. ಹೀಗಾಗಿ ಹೆಚ್ಚುವರಿಯಾಗಿ ನೇಮಕ ಮಾಡಿಕೊಂಡಿರಬಹುದೇನೋ ನನಗಂತೂ ಗೊತ್ತಿಲ್ಲ. ಹಿಂದಿನ ನಿರ್ದೇಶಕರ ಅವಧಿಯಲ್ಲಾದ ಈ ನೇಮಕಾತಿ ಪ್ರಕ್ರಿಯೆ ಕುರಿತು ನಾನಂತೂ ಹೆಚ್ಚಾಗಿ ಕಮೆಂಟ್ ಮಾಡೋಕೆ ಹೋಗಲ್ಲ ಎಂದು ಹೇಳಿದರು.