ಬಳ್ಳಾರಿ: ಜಿಲ್ಲೆಯ ಕಂಪ್ಲಿ ಪಟ್ಟಣದಲ್ಲಿ ಮಂಗಳವಾರ ಮಧ್ಯಾಹ್ನ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮದ್ಯದ ವಾಹನದ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿ, ಅಕ್ರಮ ಮದ್ಯ ವಶಕ್ಕೆ ಪಡೆದಿದ್ದಾರೆ.
ಹೊಸಪೇಟೆ ವಿಭಾಗದ ಅಬಕಾರಿ ಜಂಟಿ ಆಯುಕ್ತರ ನಿರ್ದೇಶನದಂತೆ ಖಚಿತ ಮಾಹಿತಿ ಆಧಾರದ ಮೇಲೆ ಕಂಪ್ಲಿ ಪಟ್ಟಣದ ಬಳ್ಳಾರಿ ರಸ್ತೆಯ ಸಕ್ಕರೆ ಕಾರ್ಖಾನೆ ಬಳಿಯಲ್ಲಿ ಅಬಕಾರಿ ಅಧಿಕಾರಿಗಳು ರಸ್ತೆ ಗಸ್ತು ಮಾಡುತ್ತಿದ್ದರು. ಈ ಸಮಯದಲ್ಲಿ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ವಿವಿಧ ಬ್ರಾಂಡ್ಗಳ 3.54 ಲಕ್ಷ ರೂ. ಮೌಲ್ಯದ 195.48 ಲೀಟರ್ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಅಬಕಾರಿ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಮಯದಲ್ಲಿ ಅಬಕಾರಿ ಇಲಾಖೆ ಇನ್ಸ್ಪೆಕ್ಟರ್ ಹೊನ್ನೂರವಲಿ, ಪಿಎಸ್ಐ ಎಸ್.ಎನ್.ಘೋರ್ಪಡೆ ಹಾಗೂ ಅಬಕಾರಿ ಸಿಬ್ಬಂದಿ ಇದ್ದರು.